ADVERTISEMENT

ಕನ್ನಡ ವಿರೋಧಿ ಧೋರಣೆ: ಕೇರಳದ ವಿರುದ್ಧ ಪ್ರತಿಭಟಿಸುವಂತೆ ಪ್ರತಾಪ ಸಿಂಹ ಕರೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 11:28 IST
Last Updated 28 ಜೂನ್ 2021, 11:28 IST
ಸಂಸದ ಪ್ರತಾಪ ಸಿಂಹ
ಸಂಸದ ಪ್ರತಾಪ ಸಿಂಹ    

ಮೈಸೂರು: ಕಾಸರಗೋಡು ಜಿಲ್ಲೆಯಲ್ಲಿ ಕೇರಳ ಸರ್ಕಾರ ತೋರುತ್ತಿರುವ ಕನ್ನಡ ವಿರೋಧಿ ಧೋರಣೆ ವಿರುದ್ಧ ಕನ್ನಡಿಗರು ಸಂಘಟಿತರಾಗಿ ಪ್ರತಿಭಟನೆ ನಡೆಸಬೇಕು ಎಂದು ಸಂಸದ ಪ್ರತಾಪ ಸಿಂಹ ಸೋಮವಾರ ಇಲ್ಲಿ ಕರೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ವಿಚಾರವಾಗಿ ಎಲ್ಲಾ ರಾಜಕೀಯ ನಾಯಕರು ಮಾತನಾಡಬೇಕು. ರಾಜ್ಯದ ಹಲವು ನಾಯಕರು ಕೇರಳದ ನಾಯಕರೊಂದಿಗೆ ಆಪ್ತ ಸಂಬಂಧ ಹೊಂದಿದ್ದಾರೆ. ಕನ್ನಡದ ಮೇಲಿನ ಪ್ರಹಾರ ಧೋರಣೆ ನಿಲ್ಲಿಸಬೇಕು. ಎಲ್ಲರೂ ಒಕ್ಕೂರಲಿನಿಂದ ದನಿ ಎತ್ತಬೇಕು’ ಎಂದರು.

‘ಕಾಸರಗೋಡಿನಲ್ಲಿ ಕನ್ನಡವನ್ನು ನಿರ್ನಾಮ ಮಾಡುವ ಹುನ್ನಾರವನ್ನು ಕೇರಳದ ಕಮ್ಯುನಿಸ್ಟ್‌ ಸರ್ಕಾರ ನಡೆಸಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಯು, ಕೇರಳದ ಮುಖ್ಯಮಂತ್ರಿ ಜೊತೆ ಮಾತನಾಡಬೇಕು. ಮಂಜೇಶ್ವರ ವಿಧಾನಸಭೆ ವ್ಯಾಪ್ತಿಯಲ್ಲಿ ಊರುಗಳ ಕನ್ನಡದ ಹೆಸರನ್ನು ಬದಲಾಯಿಸುವ ಪ್ರಕ್ರಿಯೆ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಯಾವುದೇ ಹೋರಾಟಗಾರರು, ಸಾಹಿತಿಗಳು, ರಾಜಕಾರಣಿಗಳು ಈ ವಿಚಾರವಾಗಿ ಮಾತನಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಲಸಿಕೆ ಅಭಿಯಾನವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಹಿಂದೆ ಉಚಿತವಾಗಿ ಉಪ್ಪು, ಸಕ್ಕರೆ, ಅಕ್ಕಿ, ಬೇಳೆ ಕೊಡುವಾಗ ಆ ಪೊಟ್ಟಣಗಳ ಮೇಲೆ ಸಿದ್ದರಾಮಯ್ಯ ಅವರ ಫೋಟೊ ಇರಲಿಲ್ಲವೇ? ಆಯಾಯ ಸಂದರ್ಭದಲ್ಲಿನ ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖೆಯ ಸಚಿವರ ಫೋಟೊ ಹಾಕುವುದು ಸಹಜ. ಹಾಗೆಯೇ, ಲಸಿಕೆ ಅಭಿಯಾನವೂ ರಾಷ್ಟ್ರವ್ಯಾಪ್ತಿ ನಡೆಯುತ್ತಿರುವುದರಿಂದ ಪ್ರಧಾನಿ ಫೋಟೊ ಹಾಕಲಾಗಿದೆ. ಆದರೆ, ಪಕ್ಷದ ಚಿಹ್ನೆ, ಧ್ವಜ ಅಥವಾ ಸರ್ಕಾರದ ವ್ಯವಸ್ಥೆಯೊಳಗೆ ಇಲ್ಲದ ವ್ಯಕ್ತಿಯ ಫೋಟೊ ಹಾಕುವುದು ತಪ್ಪು’ ಎಂದರು.

‘ಸಂಸದನಿಗಿಂತ ದೊಡ್ಡ ಸ್ಥಾನ ಇಲ್ಲ’

‘ಮೈಸೂರು–ಕೊಡಗು ಸಂಸದನಾಗಿ ನನ್ನನ್ನು ಜನರು ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಇದಕ್ಕಿಂತ ದೊಡ್ಡ ಸ್ಥಾನ, ಹುದ್ದೆ, ಸಿಂಹಾಸನ ಯಾವುದು ಇಲ್ಲ’ ಎಂದು ಪ್ರತಾಪಸಿಂಹ ಹೇಳಿದರು.

ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಮಂತ್ರಿಗಿರಿಯೇ ಎಲ್ಲವೂ ಅಲ್ಲ. ಜನರು ಸಂಸದನಾಗಿಯೋ, ಶಾಸಕನಾಗಿಯೋ ಆಯ್ಕೆ ಮಾಡುವುದು ನಿಯತ್ತಾಗಿ ಕೆಲಸ ಮಾಡು ಎಂಬ ಉದ್ದೇಶದಿಂದಲೇ ಹೊರತು ಸಚಿವ ಸ್ಥಾನದ ಕನಸು ಕಾಣುವುದಕ್ಕಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.