ADVERTISEMENT

ಅಪೆಕ್ಸ್ ಬ್ಯಾಂಕ್‌ ಹಗರಣ: ಜೆಡಿಎಸ್‌ ಧರಣಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 19:45 IST
Last Updated 23 ಮಾರ್ಚ್ 2020, 19:45 IST
   

ಬೆಂಗಳೂರು: ರಾಜ್ಯ ಅಪೆಕ್ಸ್‌ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಚರ್ಚೆಗೆ ಕೂಡಲೇ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಸದಸ್ಯರು ವಿಧಾನಸಭೆಯಲ್ಲಿ ಸೋಮವಾರ ಧರಣಿ ನಡೆಸಿದರು.

ಈ ವಿಚಾರದ ಚರ್ಚೆಗೆ ನಿಯಮ 60ರಡಿ ಜೆಡಿಎಸ್‌ ಸದಸ್ಯರು ಪ್ರಸ್ತಾವ ಸಲ್ಲಿಸಿದರು. ‘ನಿಯಮ 69ರಡಿ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಪೂರ್ವಭಾವಿವಾಗಿ 5 ನಿಮಿಷ ವಿಷಯ ಪ್ರಸ್ತಾಪಿಸಲು ಅವಕಾಶ ನೀಡುತ್ತೇನೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಮಾಗಡಿಯ ಮಂಜುನಾಥ್ ಅವರಿಗೆ ಮಾತನಾಡಲು ಅವಕಾಶ ನೀಡಿದರು. ‘ಈ ವಿಷಯ ಯಾವುದೇ ನಿಯಮದ ಅಡಿಯಲ್ಲಿ ಬರುವುದಿಲ್ಲ. ಆದರೂ ಅವಕಾಶ ನೀಡುತ್ತಿದ್ದೇನೆ’ ಎಂದು ಕಾಗೇರಿ ಹೇಳಿದರು.

‘ನಿಯಮದ ಅಡಿಯಲ್ಲಿ ಬರುವುದಿಲ್ಲ ಎಂದು ನೀವು ರೂಲಿಂಗ್‌ ನೀಡಿದ್ದೀರಿ. ಈಗ ಮಾತನಾಡಲು ಅವಕಾಶ ನೀಡಬೇಡಿ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿ ಸದನದಿಂದ ತೆರಳಿದರು. ‘ಈ ವಿಷಯದ ಚರ್ಚೆಗೆ ಸರ್ಕಾರ ಒಪ್ಪಿಲ್ಲ. ಈಗ ಬಜೆಟ್‌ ಮೇಲಿನ ಚರ್ಚೆ ಮುಂದುವರಿಯಲಿದೆ. ಆರ್.ವಿ.ದೇಶಪಾಂಡೆ ಮಾತನಾಡಲಿದ್ದಾರೆ’ ಎಂದು ಸಭಾಧ್ಯಕ್ಷರು ಪ್ರಕಟಿಸಿದರು.

ADVERTISEMENT

ಚರ್ಚೆಗೆ ಈಗಲೇ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಸದಸ್ಯರು ಸಭಾ‌ಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು. ಧರಣಿ ಕೈಬಿಡಿ ಎಂದು ಕಾಗೇರಿ ಮನವಿ ಮಾಡಿದರು. ಅದಕ್ಕೆ ಜೆಡಿಎಸ್‌ ಸದಸ್ಯರು ಒಪ್ಪಲಿಲ್ಲ. ಆರ್.ವಿ.ದೇಶಪಾಂಡೆ ಸಹ ಮನವೊಲಿಸಲು ಪ್ರಯತ್ನಿಸಿದರು.

‘ಈ ರೀತಿ ಹಟ ತೋರುವುದು ಸರಿಯಲ್ಲ. ಕೋವಿಡ್‌–19ರ ಕುರಿತು ಚರ್ಚೆಗೂ ನಾನು ಅವಕಾಶ ನೀಡಿಲ್ಲ. ಸಂಜೆ ಚರ್ಚೆಗೆ ಅವಕಾಶ ನೀಡುತ್ತೇನೆ’ ಎಂದು ಸಭಾಧ್ಯಕ್ಷರು ಭರವಸೆ ನೀಡಿದರು. ಜೆಡಿಎಸ್‌ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ಬಳಿಕ ಕಲಾ‍ಪವನ್ನು 5 ನಿಮಿಷ ಮುಂದೂಡಲಾಯಿತು. ಜೆಡಿಎಸ್‌ ಸದಸ್ಯರ ಜತೆಗೆ ಸಭಾಧ್ಯಕ್ಷರು ಸಂಧಾನ ನಡೆಸಿದರು. ಬಳಿಕ ಧರಣಿ ಕೈಬಿಟ್ಟರು.

‘ಅಪೆಕ್ಸ್‌ ಬ್ಯಾಂಕಿನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇತರರು ಒಂದುಗೂಡಿ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ವ್ಯಕ್ತಿಗಳಿಗೆ, ವಾಣಿಜ್ಯ ಸಂಸ್ಥೆಗಳಿಗೆ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ನೂರಾರು ಕೋಟಿ ಸಾಲ ನೀಡಿದ್ದಾರೆ. ಈ ಸಾಲವನ್ನು ಸ್ವಂತ ಉದ್ದೇಶಕ್ಕೆ ಬಳಸಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ. ಸಾಲಗಾರರು ಸಕಾಲಕ್ಕೆ ಸಾಲ ಹಾಗೂ ಬಡ್ಡಿ ಪಾವತಿಸಿಲ್ಲ. ಇದರಿಂದಾಗಿ, ₹462.88 ಕೋಟಿಯಷ್ಟು ಎನ್‌ಪಿಎ ಆಗಿದೆ’ ಎಂದು ಜೆಡಿಎಸ್‌ ಸದಸ್ಯ ಎಚ್‌.ಡಿ.ರೇವಣ್ಣ ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.