ADVERTISEMENT

ಎಪಿಎಂಸಿ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 19:46 IST
Last Updated 17 ಡಿಸೆಂಬರ್ 2020, 19:46 IST
ಸೆಸ್‌ ಹೆಚ್ಚಳ ವಿರೋಧಿಸಿ ಕಲಬುರ್ಗಿಯ ಗಂಜ್‌ನಲ್ಲಿರುವ ಅಡತಿ ಅಂಗಡಿಗಳು ಬಂದ್ ಆಗಿದ್ದರಿಂದ ಗುರುವಾರ ಕೆಲಸಗಾರರು ಕೆಲಸವಿಲ್ಲದೆ ಕುಳಿತಿದ್ದರು
ಸೆಸ್‌ ಹೆಚ್ಚಳ ವಿರೋಧಿಸಿ ಕಲಬುರ್ಗಿಯ ಗಂಜ್‌ನಲ್ಲಿರುವ ಅಡತಿ ಅಂಗಡಿಗಳು ಬಂದ್ ಆಗಿದ್ದರಿಂದ ಗುರುವಾರ ಕೆಲಸಗಾರರು ಕೆಲಸವಿಲ್ಲದೆ ಕುಳಿತಿದ್ದರು   

ಕಲಬುರ್ಗಿ: ಮಾರುಕಟ್ಟೆ ಸೆಸ್‌ ಶೇ 35 ಪೈಸೆಯಿಂದ ಏಕಾಏಕಿ ಶೇ ₹ 1ಕ್ಕೆ ಏರಿಸಿದ ಕ್ರಮ ಖಂಡಿಸಿ ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ), ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ ಕರೆ ನೀಡಿರುವ ಎಪಿಎಂಸಿ ಬಂದ್‌ಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಲಬುರ್ಗಿ, ರಾಯಚೂರು, ಬೀದರ್‌ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಎಪಿಎಂಸಿಗಳು ಎಂದಿ
ನಂತೆ ಕಾರ್ಯನಿರ್ವಹಿಸಿದವು. ವರ್ತಕರ ಸಂಘಟನೆಗಳ ಪದಾಧಿಕಾರಿಗಳು ಆಯಾ ಎಪಿಎಂಸಿಗಳ ಕಾರ್ಯದರ್ಶಿಗಳಿಗೆ ಮನವಿಪತ್ರ ಸಲ್ಲಿಸಿದರು. ಸರ್ಕಾರ ಎಪಿಎಂಸಿಗಳನ್ನು ಬಂದ್ ಮಾಡುವ ಉದ್ದೇಶದಿಂದಲೇ ಶುಲ್ಕವನ್ನು ಹೆಚ್ಚಿಸಿದೆ ಎಂದು ಆರೋಪಿಸಿದರು.

ಕಲಬುರ್ಗಿಯ ಎಪಿಎಂಸಿಯಲ್ಲಿ ಮಾರಾಟ ಹಾಗೂ ಖರೀದಿ ಪ್ರಕ್ರಿಯೆ ನಡೆಯಲಿಲ್ಲ. ರೈತರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲಿಲ್ಲ. ಸರಕು ಸಾಗಣೆ ವಾಹನಗಳು ಮಾರುಕಟ್ಟೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ಹಮಾಲರು ಕೆಲಸ ಇಲ್ಲದೆ ಹೋಟೆಲ್‌ಗಳಲ್ಲಿ ಕುಳಿತು ಸಮಯ ಕಳೆದರು.

ADVERTISEMENT

ಪೂರ್ವ ಮಾಹಿತಿಯಿಲ್ಲದೆ ರೈತರು ರಾಯಚೂರು ಎಪಿಎಂಸಿಗೆ ಭತ್ತ ತೆಗೆದುಕೊಂಡು ಬಂದಿದ್ದರು. ಅಲ್ಲಲ್ಲಿ ಭತ್ತದ ಚೀಲುಗಳ ರಾಶಿಯೊಂದಿಗೆ ರೈತರು ಉಳಿದಿರುವುದು ಕಂಡುಬಂತು. ಬೀದರ್‌ ಜಿಲ್ಲೆ ಹುಮನಾಬಾದ್‌ ಎಪಿಎಂಸಿ ಬಂದ್‌ ಆಗಿರಲಿಲ್ಲ.

ಕೊಪ್ಪಳ ಜಿಲ್ಲೆಯಲ್ಲಿ ಎಪಿಎಂಸಿಗಳಲ್ಲಿ ಎಂದಿನಂತೆ ವಹಿವಾಟು ಇತ್ತು. ಸೆಸ್ ಏರಿಕೆಗೆ ವಿರೋಧ ವ್ಯಕ್ತ ಪಡಿಸಿದ ವರ್ತಕರು ಮನವಿ ಮಾತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.