ADVERTISEMENT

ಮದ್ಯದಂಗಡಿ ಪರವಾನಗಿ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 23:30 IST
Last Updated 14 ಜೂನ್ 2025, 23:30 IST
ಮದ್ಯದಂಗಡಿ– ಸಾಂದರ್ಭಿಕ ಚಿತ್ರ
ಮದ್ಯದಂಗಡಿ– ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಮದ್ಯದಂಗಡಿ ಪರವಾನಗಿ ಶುಲ್ಕದಲ್ಲಿ ಈಡಿಗ, ಬಿಲ್ಲವ ಸಮುದಾಯದವರಿಗೆ ಶೇ 50ರಷ್ಟು ರಿಯಾಯಿತಿ ನೀಡಬೇಕು’ ಎಂದು ಆಗ್ರಹಿಸಿ ಈ ಸಮುದಾಯಗಳ ಮುಖಂಡರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.

ವಿಧಾನ ಪರಿಷತ್‌ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್‌ ನೇತೃತ್ವದಲ್ಲಿ ನಿಯೋಗವು ದೆಹಲಿಯಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದೆ.

‘ಆಂಧ್ರ ಪ್ರದೇಶ ಸರ್ಕಾರವು ಅಲ್ಲಿನ ಒಟ್ಟು ಮದ್ಯದಂಗಡಿಗಳ ಪರವಾನಗಿಗಳಲ್ಲಿ ಶೇ 10ರಷ್ಟನ್ನು ಈಡಿಗ ಸಮುದಾಯಕ್ಕೆ ಮೀಸಲಿರಿಸಿದೆ. ಅಲ್ಲದೆ, ಮದ್ಯದಂಗಡಿಗಳ ಮಾಲೀಕರು ಈಡಿಗ ಸಮುದಾಯದವರಾಗಿದ್ದರೆ ಪರವಾನಗಿ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿಯನ್ನೂ ನೀಡಿದೆ. ಈ ಎರಡೂ ವಿಷಯಗಳ ಕುರಿತು ಅಧ್ಯಯನ ನಡೆಸಿ, ರಾಜ್ಯದಲ್ಲೂ ಅದೇ ರೀತಿಯ ಸೌಲಭ್ಯವನ್ನು ನೀಡಬೇಕು’ ಎಂದು ನಿಯೋಗ ಒತ್ತಾಯಿಸಿದೆ.

ADVERTISEMENT

‘ಮದ್ಯ ಮಾರಾಟದ ಲಾಭಾಂಶದಲ್ಲಿ ಶೇ 20ರಷ್ಟನ್ನು ಮದ್ಯ ಮಾರಾಟಗಾರರಿಗೆ ನೀಡಬೇಕು, ಮದ್ಯ ಮಾರಾಟದಿಂದ ಆದಾಯವನ್ನು ಹೆಚ್ಚಿಸಿಕೊಳ್ಳಲು ರಾಜ್ಯ ಫೆಡರೇಷನ್‌ ಆಫ್‌ ವೈನ್‌ ಮರ್ಚಂಟ್ಸ್‌ ಅಸೋಸಿಯೇಷನ್‌ ಮೂಲಕ ನೀಡಿರುವ ಸಲಹೆಯನ್ನು ಪರಿಗಣಿಸಬೇಕು, ತೆಲಂಗಾಣದಲ್ಲಿ ಮದ್ಯ ಮಾರಾಟದಲ್ಲಿ ತೊಡಗಿರುವ ಈಡಿಗರೇ ಆಗಿರುವ ಗೌಡ್‌ ಸಮುದಾಯದ ಮದ್ಯ ವ್ಯಾಪಾರಿಗಳಿಗೆ ವ್ಯಾವಹಾರಿಕ ಲಾಭಾಂಶ ನೀಡುವ ಮೂಲಕ ಕುಲ ಕಸುಬುದಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಆ ಯೋಜನೆಯನ್ನು ಕರ್ನಾಟಕದಲ್ಲಿಯೂ ಜಾರಿಗೆ ತರಬೇಕು’ ಎಂದೂ ನಿಯೋಗ ಒತ್ತಾಯಿಸಿದೆ.

ಸಮುದಾಯದ ಮುಖಂಡರಾದ ಕೆ. ಗೋಪಿ, ಗುರುರಾಜ್‌ (ಮೈಸೂರು), ಮೋಹನ್‌ ರಾಜ್‌, ಶಿವಕುಮಾರ್‌ (ಚಾಮರಾಜನಗರ), ಓಂಪ್ರಸಾದ್‌ (ಮಂಗಳೂರು), ಅಶೋಕ್‌ ಗುತ್ತೇದಾರ್‌ (ಕಲಬುರಗಿ) ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.