ADVERTISEMENT

ಕೋವಿಡ್-19: ‘ದೆಹಲಿಗೆ ವಿಶೇಷ ಪ್ರತಿನಿಧಿ ಕಳುಹಿಸಿ’ ಎಂದ ಯು.ಟಿ. ಖಾದರ್

ವಿದೇಶದಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರ ನೆರವು ನೀಡಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 13:10 IST
Last Updated 18 ಮಾರ್ಚ್ 2020, 13:10 IST
ಶಾಸಕ ಯು.ಟಿ, ಖಾದರ್
ಶಾಸಕ ಯು.ಟಿ, ಖಾದರ್   

ಮಂಗಳೂರು: ‘ಕೊರೊನಾ ವೈರಸ್’ ಪರಿಣಾಮ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರ ನೆರವಿಗಾಗಿ ರಾಜ್ಯ ಸರ್ಕಾರವು ದೆಹಲಿಗೆ ವಿಶೇಷ ಪ್ರತಿನಿಧಿ(ಅಧಿಕಾರಿ)ಯನ್ನು ಕಳುಹಿಸಿ ಕೊಡಬೇಕು. ಅವರು ವಿದೇಶಾಂಗ ಇಲಾಖೆ, ರಾಯಭಾರ ಕಚೇರಿಗಳ ಜೊತೆ ನಿಕಟ ಸಂಪರ್ಕದ ಮೂಲಕ ಅವಶ್ಯಕತೆ ಇದ್ದವರಿಗೆ ನೆರವು ನೀಡಬೇಕು’ ಎಂದು ಶಾಸಕ ಯು.ಟಿ.ಖಾದರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಮಂಗಳೂರಿನ ವಿದ್ಯಾರ್ಥಿಯೊಬ್ಬನ ಕುರಿತು ಸರ್ಕಾರದ ಗಮನ ಸೆಳೆಯಲಾಗಿದೆ. ಹೀಗೆ ಅನೇಕರು ತೊಂದರೆಯಲ್ಲಿ ಇದ್ದಾರೆ. ಅದಕ್ಕಾಗಿ ಒಬ್ಬರು ಅನುಭವಿ ಹಾಗೂ ಪರಿಣತ ಅಧಿಕಾರಿಯನ್ನು ದೆಹಲಿಗೆ ಪ್ರತಿನಿಧಿಯಾಗಿ ಕಳುಹಿಸಿಕೊಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ’ ಎಂದರು.

‘ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಜನರು ಸಹಕಾರ ನೀಡಬೇಕು. ಜನರೂ ಸ್ವಯಂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ, ಸೋಂಕು ಅಷ್ಟು ಸುಲಭವಾಗಿ ತಗಲುವುದಿಲ್ಲ’ ಎಂದು ಸಲಹೆ ನೀಡಿದರು.

ADVERTISEMENT

‘ಕೇರಳ ರಾಜ್ಯದ ಗಡಿ ಮೂಲಕ ಹಾಗೂ ಪ್ರಮುಖ ನಗರಗಳಿಂದ ಬರುವವರನ್ನು ತಪಾಸಣೆ ನಡೆಸಬೇಕು ಅದಕ್ಕಾಗಿ ರೈಲು ನಿಲ್ದಾಣ, ಬಸ್‌ ನಿಲ್ದಾಣದಲ್ಲೂ ತಪಾಸಣಾ ಕೇಂದ್ರ ತೆರೆಯಬೇಕು’ ಎಂದು ಅವರು ಒತ್ತಾಯಿಸಿದರು.

‘ವ್ಯಾಪಾರಿಗಳು ಹಾಗೂ ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಅದಕ್ಕಾಗಿ ಕಟ್ಟಡಗಳ ಮಾಲೀಕರು ಈ ತಿಂಗಳ ಬಾಡಿಗೆಯಲ್ಲಿ ವಿನಾಯಿತಿ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.