ADVERTISEMENT

ಕೆಪಿಎಸ್‌ಸಿಗೆ ನೇಮಕ: ಸಿಎಸ್‌ ಅಧ್ಯಕ್ಷತೆಯ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 4 ಮೇ 2025, 15:33 IST
Last Updated 4 ಮೇ 2025, 15:33 IST
ಕೆಪಿಎಸ್‌ಸಿ
ಕೆಪಿಎಸ್‌ಸಿ    

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರು, ಸದಸ್ಯರ ನೇಮಕಾತಿಗೆ ಸರ್ಕಾರಕ್ಕೆ ಹೆಸರು ಶಿಫಾರಸು ಮಾಡಲು ಮುಖ್ಯ ಕಾರ್ಯದರ್ಶಿ (ಸಿಎಸ್) ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರನ್ನು ಒಳಗೊಂಡ ‘ವ್ಯಾಪಕ ಆಧಾರಿತ ಹುಡುಕಾಟ ಸಮಿತಿ’ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾದ ಐಎಎಸ್‌ ಅಧಿಕಾರಿ ಅಥವಾ ಕೇಂದ್ರ ಸರ್ಕಾರದ ಹಿಂದಿನ ಕಾರ್ಯದರ್ಶಿ, ಬೆಂಗಳೂರಿನಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ, ಭಾರತೀಯ ವಿಜ್ಞಾನ ಸಂಸ್ಥೆ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಥವಾ ಸಮಾನ ಹೆಸರಾಂತ ಕೇಂದ್ರೀಯ ಸಂಸ್ಥೆಗಳ ನಿವೃತ್ತ ಅಥವಾ ಅಧಿಕಾರರೂಢ ನಿರ್ದೇಶಕರು ಮತ್ತು ಸರ್ಕಾರದ ಕಾರ್ಯದರ್ಶಿ ಅಥವಾ ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಿರುವ ಐಎಎಸ್‌ ಅಥವಾ ಕೇಂದ್ರ ನಾಗರಿಕ ಸೇವೆಗಳ ಗ್ರೂಪ್‌ ‘ಎ’ ಅಧಿಕಾರಿ ಸಮಿತಿಯ ಸದಸ್ಯರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಕಾರ್ಯದರ್ಶಿ ಈ ಸಮಿತಿಯ ಸದಸ್ಯ ಕಾರ್ಯದರ್ಶಿ.

ಸಮಿತಿ ಕೆಲಸವೇನು?: ‘ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ಸ್ಥಾನ ತೆರವಾಗುವ ಮೂರು ತಿಂಗಳ ಮೊದಲೇ ತೆರವಾಗುವ ಅಧಿಕಾರಿ/ ಅಧಿಕಾರೇತರ ಹುದ್ದೆಗಳ ಸಂಖ್ಯೆ, ಅರ್ಹತೆಯ ವಿವರ, ಸಂಬಳ ಮತ್ತು ಭತ್ಯೆಗಳು, ಅರ್ಜಿ ನಮೂನೆ ಮತ್ತು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಇತರ ಅಗತ್ಯ ಮಾಹಿತಿಯನ್ನು ಒಳಗೊಂಡ ಪತ್ರಿಕಾ ಪ್ರಕಟಣೆಯನ್ನು ಸಮಿತಿಯ ಸದಸ್ಯ ಕಾರ್ಯದರ್ಶಿ ಹೊರಡಿಸಬೇಕು. ಸ್ವೀಕೃತವಾಗುವ ಅಭ್ಯರ್ಥಿಗಳ ಸ್ವಯಂ ವಿವರಗಳನ್ನು ಪರಿಶೀಲಿಸಿ ಆಯೋಗದ ಅಗತ್ಯವನ್ನು ಗಮನದಲ್ಲಿರಿಸಿ, ಅಗತ್ಯವಿದ್ದರೆ ವೈಯಕ್ತಿವಾಗಿ ಚರ್ಚೆಗೆ ಆಹ್ವಾನಿಸಿ ಮೌಲ್ಯಮಾಪನ ಮಾಡಬೇಕು. ನಂತರ ಒಬ್ಬರು ಅಧ್ಯಕ್ಷರು, ಸದಸ್ಯರ ಸ್ಥಾನಕ್ಕೆ ತಲಾ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಸೂಕ್ತ ಕಾರಣಗಳನ್ನು ನಮೂದಿಸಿ ಅಂತಿಮಗೊಳಿಸಿದ ಅಭ್ಯರ್ಥಿಗಳ ಕಿರುಪಟ್ಟಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಬೇಕು. ಕಿರುಪಟ್ಟಿಯಲ್ಲಿರುವ ಇಬ್ಬರು ಅಭ್ಯರ್ಥಿಗಳಲ್ಲಿ ಹುದ್ದೆಗೆ ಸೂಕ್ತವಾದ ಒಬ್ಬರ ಹೆಸರನ್ನು ಅಂತಿಮಗೊಳಿಸಿ ನೇಮಕ ಮಾಡಲು ರಾಜ್ಯಪಾಲರಿಗೆ ಸಲ್ಲಿಸಬೇಕು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ADVERTISEMENT

ಕೆಪಿಎಸ್‌ಸಿ ಸುಧಾರಣೆಗಾಗಿ ರಾಜ್ಯ ಸರ್ಕಾರ 2013ರಲ್ಲಿ ರಚಿಸಿದ್ದ ಪಿ.ಸಿ. ಹೋಟಾ ಸಮಿತಿಯು ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರ ನೇಮಕಾತಿಗೆ ಮುಖ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ‘ವ್ಯಾಪಕ ಆಧಾರಿತ ಹುಡುಕಾಟ ಸಮಿತಿ’ ರಚಿಸುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಸಚಿವ ಸಂಪುಟ ಸಭೆಯು ಮಾರ್ಚ್ 14ರಂದು ಅನುಮೋದನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.