ADVERTISEMENT

ವಿಜಯೇಂದ್ರ ಕಿತ್ತೆಸೆಯಿರಿ: ವರಿಷ್ಠರಿಗೆ ಭಿನ್ನರ ಪಟ್ಟು

ನಡ್ಡಾ ಭೇಟಿಯಾದ ಅರವಿಂದ ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 15:25 IST
Last Updated 31 ಜನವರಿ 2025, 15:25 IST
ಜೆ.ಪಿ.ನಡ್ಡಾ ಅವರಿಗೆ ಅರವಿಂದ ಲಿಂಬಾವಳಿ ಅವರು ವಕ್ಫ್‌ ಅಧ್ಯಯನ ವರದಿ ಸಲ್ಲಿಸಿದರು. 
ಜೆ.ಪಿ.ನಡ್ಡಾ ಅವರಿಗೆ ಅರವಿಂದ ಲಿಂಬಾವಳಿ ಅವರು ವಕ್ಫ್‌ ಅಧ್ಯಯನ ವರದಿ ಸಲ್ಲಿಸಿದರು.    

ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಅವರನ್ನು ಕೂಡಲೇ ಬದಲಾವಣೆ ಮಾಡಬೇಕು. ಇಲ್ಲದಿದ್ದರೆ, ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಶತಃಸಿದ್ಧ ಎಂದು ಬಿಜೆಪಿ ಭಿನ್ನರ ಬಣವು ವರಿಷ್ಠರಿಗೆ ಸೂಚ್ಯವಾಗಿ ತಿಳಿಸಿದೆ. 

ಭಿನ್ನರ ಬಣದ ನಾಯಕ ಅರವಿಂದ ಲಿಂಬಾವಳಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಶುಕ್ರವಾರ ಸಂಜೆ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ರಾಜ್ಯ ಘಟಕದಲ್ಲಿ ಉಂಟಾಗಿರುವ ಗೊಂದಲ, ಅದಕ್ಕೆ ಕಾರಣಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಿದರು. ವರಿಷ್ಠರು ಕೂಡಲೇ ಮಧ್ಯಪ್ರವೇಶ ಮಾಡದಿದ್ದರೆ ಭಿನ್ನಮತ ಇನ್ನಷ್ಟು ತೀವ್ರವಾಗಲಿದೆ ಎಂದೂ ಅವರು ಗಮನಕ್ಕೆ ತಂದರು. 

‘ವಿಜಯೇಂದ್ರ ದುರಂಹಕಾರದಿಂದ ವರ್ತಿಸುತ್ತಿದ್ದಾರೆ. ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಶಾಸಕರ ಮಾತಿಗೂ ಬೆಲೆ ಇಲ್ಲ. ಯಾವುದೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ. ಕಾಂಗ್ರೆಸ್‌ ನಾಯಕರ ಜತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ಆಗುತ್ತಿಲ್ಲ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ನೇಮಕದಲ್ಲೂ ಭಾರಿ ಲೋಪ ಆಗಿದೆ. ನೇಮಕದ ಸಂದರ್ಭದಲ್ಲಿ ವಿಜಯೇಂದ್ರ ಆಪ್ತರಿಗೆ ಮಣೆ ಹಾಕಲಾಗಿದೆ’ ಎಂದು ಲಿಂಬಾವಳಿ ದೂರಿದರು ಎಂದು ಮೂಲಗಳು ತಿಳಿಸಿವೆ. 

‘ಬೀದರ್‌ನಿಂದ ಬಳ್ಳಾರಿಯವರೆಗೆ ‘ವಕ್ಫ್ ಹಠಾವೋ– ದೇಶ ಬಚಾವೋ’ ಅಭಿಯಾನದ ಅಡಿಯಲ್ಲಿ ಪ್ರವಾಸ ನಡೆಸಿದ್ದೇವೆ. ಈ ವೇಳೆ ಅನೇಕ ಜನರು ವಕ್ಫ್ ಬೋರ್ಡ್‌ನಿಂದ ತೊಂದರೆ ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ. ವಕ್ಫ್ ಕಾನೂನಿನಲ್ಲಿರುವ ಲೋಪದೋಷಗಳು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತಿವೆ’ ಎಂದು ಲಿಂಬಾವಳಿ ತಿಳಿಸಿದರು. 

ADVERTISEMENT

ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವುದು ಅತ್ಯಗತ್ಯ. ವಕ್ಫ್ ಆಸ್ತಿ ಎಂದು ಗುರುತಿಸಲಾಗಿರುವ ಸ್ಥಳಗಳನ್ನು ಕೇಂದ್ರ ಸರ್ಕಾರ ವಶಪಡಿಸಿಕೊಂಡು ಸಾರ್ವಜನಿಕ ಆಸ್ತಿ ಎಂದು ಘೋಷಿಸಬೇಕು ಎಂದು ವಿನಂತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.