ADVERTISEMENT

ಅಡಿಕೆ ಆಮದು: ಕನಿಷ್ಠ ದರ ₹351ಕ್ಕೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 19:22 IST
Last Updated 14 ಫೆಬ್ರುವರಿ 2023, 19:22 IST
   

ನವದೆಹಲಿ: ಅಡಿಕೆಯ ಆಮದಿನ ಕನಿಷ್ಠ ದರವನ್ನು ಪ್ರತಿ ಕೆ.ಜಿ.ಗೆ ₹251ಯಿಂದ ₹351ಕ್ಕೆ ಹೆಚ್ಚಿಸಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ.

‘ಇನ್ನು ಮುಂದೆ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಿದರೂ ಕೆ.ಜಿ.ಗೆ ₹351 ಕ್ಕಿಂತ ಹೆಚ್ಚಿನ ಬೆಲೆ ಕೊಡಬೇಕಾಗಿದೆ‘ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವ ಕುರಿತು ತಮ್ಮ ಫೇಸ್‌ ಬುಕ್‌ ಪುಟದಲ್ಲಿ ಬರೆದುಕೊಂಡಿರುವ ಶೋಭಾ, ‘ವಿದೇಶದಿಂದ ಕಡಿಮೆ ಬೆಲೆಗೆ ಅಮದಾಗುತ್ತಿರುವ ಅಡಿಕೆ ರಾಜ್ಯದ ಬೆಳೆಗಾರರನ್ನು ಕಂಗೆಸಿಡಿಸಿತ್ತು. ನಮ್ಮ ರಾಜ್ಯದ ಅಡಿಕೆಯನ್ನು ಕಡಿಮೆ ಬೆಲೆಗೆ ಅಮದು ಆಗುತ್ತಿದ್ದ ಅಡಿಕೆ ತೀವ್ರವಾಗಿ ಬಾಧಿಸಿತ್ತು. ಹೊರದೇಶಗಳಿಂದ ಆಮದಾಗುವ ಅಡಿಕೆಯ ಆಮದು ದರವನ್ನು ಹೆಚ್ಚಿಸಿದ್ದರಿಂದ ಬೆಳೆಗಾರರಿಗೆ ನ್ಯಾಯ ಸಿಗಲಿದೆ. ಇನ್ನು ಮುಂದೆ ಅಡಿಕೆ ಆಮದು ಮಾಡುವಾಗ ಪ್ರತಿ ಕೆ.ಜಿ.ಗೆ ₹351 ಕ್ಕಿಂತ ಹೆಚ್ಚಿನ ದರ ಕೊಡಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಬದ್ಧ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೋರಿಸಿಕೊಟ್ಟಿದೆ’ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಡಿಕೆ ಆಮದು ಪ್ರಮಾಣ ಗಣನೀಯವಾಗಿ ಹೆಚ್ಚಳ ಆಗಿದೆ. 2022–23ರ ಆರ್ಥಿಕ ವರ್ಷದ ನವೆಂಬರ್ ಅಂತ್ಯದವರೆಗೆ 61,450 ಟನ್‌ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ. ಅಡಿಕೆಯ ಮೇಲಿನ ಆಮದು ಸುಂಕವನ್ನು ಹೆಚ್ಚಿಸಬೇಕು ಎಂದು ಅಡಿಕೆ ಬೆಳೆಗಾರರು ಒತ್ತಾಯಿಸಿದ್ದರು.

ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ‘ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿತವನ್ನು ತಡೆಯಲು ಅಡಿಕೆಗೆ ಹೆಚ್ಚಿನ ಆಮದು ಸುಂಕವನ್ನು ವಿಧಿಸಬೇಕು’ ಎಂದು ಒತ್ತಾಯಿಸಿದ್ದರು.

‘ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅಡಿಕೆ ಕ್ವಿಂಟಲ್‌ಗೆ ₹58 ಸಾವಿರ ಇತ್ತು. ವರ್ಷದ ಅಂತ್ಯಕ್ಕೆ ₹39 ಸಾವಿರಕ್ಕೆ ಇಳಿದಿದೆ. ಅಕ್ಕಪಕ್ಕದ ದೇಶಗಳಿಂದ ಕಡಿಮೆ ಗುಣಮಟ್ಟದ ಅಡಿಕೆ ಬಂದಿದ್ದರಿಂದ ಬೆಲೆ ಕುಸಿದಿದೆ’ ಎಂದು ಗಮನ ಸೆಳೆದಿದ್ದರು. ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸದಸ್ಯ ಜಿ.ಸಿ.ಚಂದ್ರಶೇಖರ್ ಸಹ ಧ್ವನಿ ಎತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.