ADVERTISEMENT

92 ಸಾವಿರ ಎಕರೆಗೆ ಅಡಿಕೆಗೆ ಕೊಳೆರೋಗ: ಸಚಿವ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 15:32 IST
Last Updated 19 ಡಿಸೆಂಬರ್ 2025, 15:32 IST
ಸಚಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ   

ಸುವರ್ಣವಿಧಾನಸೌಧ(ಬೆಳಗಾವಿ): ರಾಜ್ಯದ 10 ಜಿಲ್ಲೆಗಳಲ್ಲಿ 92,000 ಎಕರೆ ಪ್ರದೇಶದಲ್ಲಿನ ಅಡಿಕೆ ಬೆಳೆ ಕೊಳೆರೋಗಕ್ಕೆ ತುತ್ತಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಗುರುರಾಜ್‌ ಶೆಟ್ಟಿ ಗಂಟಿಹೊಳೆ ಅವರ ಪ್ರಶ್ನೆಗೆ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪರವಾಗಿ ಉತ್ತರ ನೀಡಿದರು.

‘ಎನ್‌ಡಿಆರ್‌ಎಫ್‌ನಿಂದ ಪರಿಹಾರ ನೀಡಲು ಸಾಧ್ಯವಿಲ್ಲ. ಇಲಾಖೆಯಿಂದಲೂ ಪರಿಹಾರ ನೀಡುವ ಯೋಜನೆ ಇಲ್ಲ. ಆದರೆ, ಹವಾಮಾನ ಆಧಾರಿತ ವಿಮೆಯಿಂದ ಬೆಳೆಗಾರರಿಗೆ ಸ್ಪಲ್ಪಮಟ್ಟಿಗೆ ಅನುಕೂಲ ಆಗಬಹುದು’ ಎಂದು ಹೇಳಿದರು.

ADVERTISEMENT

2025–26 ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆ ವಿಶೇಷ ಮಧ್ಯಪ್ರವೇಶ ಕಾರ್ಯಕ್ರಮದಡಿ ಎಲೆಚುಕ್ಕಿ ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ₹8.60 ಕೋಟಿ ನಿಗದಿ ಮಾಡಲಾಗಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಗಳಿಗೆ ಅಡಿಕೆ ಬೆಳೆ ಅಧಿಸೂಚಿತವಾಗಿದ್ದು, ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟವಾದರೆ ಈ ಯೋಜನೆಯಡಿ ವಿಮೆ ಪರಿಹಾರ ಒದಗಿಸಲಾಗುತ್ತದೆ ಎಂದು ಹೇಳಿದರು.

ಎಲೆಚುಕ್ಕೆ ರೋಗ, ಹಳದಿ ಎಲೆ ರೋಗ, ಕೊಳೆ ರೋಗಗಳ ನಿರ್ವಹಣೆಗಾಗಿ ರೋಗಬಾಧಿತ ಸಸ್ಯ ಭಾಗ ತೆಗೆಯುವುದು, ಸಸ್ಯ ಸಂರಕ್ಷಣಾ ಕ್ರಮ ಮತ್ತು ಪೋಷಕಾಂಶಗಳ ಸಮಗ್ರ ನಿರ್ವಹಣೆ ಸಹಾಯಧನಕ್ಕಾಗಿ ₹577.76 ಕೋಟಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಎಂಐಡಿಎಚ್‌ ಮಾರ್ಗಸೂಚಿ ಅನ್ವಯ ಶೇ 30 ರ ಸಹಾಯಧನದಂತೆ ಕೇಂದ್ರದ ಪಾಲು ₹103.99 ಕೋಟಿ ಹಾಗೂ ರಾಜ್ಯದ ಪಾಲು ₹69.33 ಕೋಟಿ ಸೇರಿ ₹173.32 ಕೋಟಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ಅಡಿಕೆ ಮತ್ತು ತೆಂಗು ಬೆಳೆ ಸೇರಿದಂತೆ ಇತರ ತೋಟಗಾರಿಕಾ ಬೆಳೆಗಳ ಸಮಗ್ರ ನಿರ್ವಹಣೆಗೆ ₹5,000 ಪ್ರತಿ ಹೆಕ್ಟೇರ್‌ ಘಟಕ ವೆಚ್ಚದಲ್ಲಿ ಶೇ 30 ರಂತೆ ಪ್ರತಿ ಹೆಕ್ಟೇರ್‌ಗೆ ₹1500 ರಂತೆ 2 ಹೆಕ್ಟೇರ್‌ವರೆಗೆ ₹3,000 ಸಹಾಯಧನ ನೀಡಲಾಗುತ್ತದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.