
ನವದೆಹಲಿ: ದೇಶದಲ್ಲಿ ಕಳೆದೊಂದು ದಶಕದಲ್ಲಿ ಅಡಿಕೆ ಆಮದು ಪ್ರಮಾಣ ಹೆಚ್ಚಳ ಆಗಿದ್ದರೆ, ರಫ್ತು ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಾ ಬಂದಿದೆ.
ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕೇಳಿದ ಪ್ರಶ್ನೆಗೆ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ. 2015–16ನೇ ಸಾಲಿನಲ್ಲಿ 6,284 ಟನ್ ಅಡಿಕೆ ರಫ್ತು ಮಾಡಿದ್ದರೆ, 2024–25ನೇ ಸಾಲಿನಲ್ಲಿ 2,396 ಟನ್‌ಗೆ ಕುಸಿದಿದೆ.
2015-16 ರಿಂದ 2024-25 ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ಅಡಿಕೆ ರಫ್ತು ಮೌಲ್ಯ ಶೇ 35.69ರಷ್ಟು ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದರು. ಆದರೆ, ದಶಕದ ಹಿಂದೆ ಕೆ.ಜಿ.ಗೆ ₹250–300ರ ಆಸುಪಾಸಿನಲ್ಲಿದ್ದ ಅಡಿಕೆ ಬೆಲೆ ಈಗ ₹450 ದಾಟಿದೆ. ಹೀಗಾಗಿ, ಮೌಲ್ಯ ಹೆಚ್ಚಳ ಆಗಿದೆ.
2016–17ನೇ ಸಾಲಿನಲ್ಲಿ 16,150 ಟನ್ ಅಡಿಕೆ ಆಮದು ಮಾಡಿಕೊಂಡಿದ್ದರೆ, 2024–25ನೇ ಸಾಲಿನಲ್ಲಿ 42,236 ಟನ್ ಆಮದು ಮಾಡಿಕೊಳ್ಳಲಾಗಿದೆ. 2022–23ರಲ್ಲಿ 78,233 ಟನ್ ಆಮದು ಆಗಿತ್ತು.
ಅಡಿಕೆಯನ್ನು ಮುಖ್ಯವಾಗಿ ಶ್ರೀಲಂಕಾ, ಮ್ಯಾನ್ಮಾರ್, ಇಂಡೊನೇಷ್ಯಾ, ಬಾಂಗ್ಲಾದೇಶ, ಯುಎಇ, ನೇಪಾಳ, ಓಮನ್, ಮಲೇಷ್ಯಾ, ಸಿಂಗಪುರ ಮತ್ತು ಥಾಯ್ಲೆಂಡ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಬಹುಪಾಲು ಅಡಿಕೆ ಆಮದು ಆಗುತ್ತಿರುವುದು ಶ್ರೀಲಂಕಾ, ಮ್ಯಾನ್ಮಾರ್, ಇಂಡೊನೇಷ್ಯಾದಿಂದ.
ಅಡಿಕೆಯ ಆಮದಿನಿಂದ ದೇಶೀಯ ಅಡಿಕೆಯ ಬೆಲೆ ಕುಸಿತವಾಗುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ರೈತರು ಹಾಗೂ ರೈತ ಸಂಘಟನೆಗಳು ಇಲಾಖೆಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.