ADVERTISEMENT

ಅಡಿಕೆ ಬೆಳೆಗಾರರಿಗೆ ‘ಕ್ಯಾನ್ಸರ್‌ಕಾರಕ’ ನುಡಿಬರೆ!

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:53 IST
Last Updated 15 ಜುಲೈ 2019, 19:53 IST
ಶಿರಸಿ ಟಿಎಸ್‌ಎಸ್‌ ಅಡಿಕೆ ಮಾರುಕಟ್ಟೆ
ಶಿರಸಿ ಟಿಎಸ್‌ಎಸ್‌ ಅಡಿಕೆ ಮಾರುಕಟ್ಟೆ   

ಶಿವಮೊಗ್ಗ/ಚಿತ್ರದುರ್ಗ/ಮಂಗಳೂರು/ಶಿರಸಿ: ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಕೇಂದ್ರ ಸಚಿವರ ಹೇಳಿಕೆ ಮಲೆನಾಡಿನ ಅಡಿಕೆ ಬೆಳೆಗಾರರಲ್ಲಿ ತಲ್ಲಣ ಮೂಡಿಸಿದೆ.

ದೇಶದಲ್ಲಿ ಬೆಳೆಯುವ ಅಡಿಕೆಯಲ್ಲಿ ರಾಜ್ಯದ ಪ್ರಮಾಣ ಶೇ 60. ರಾಜ್ಯದಲ್ಲಿ ಪ್ರತಿ ವರ್ಷ 4 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ಕೇರಳದಲ್ಲಿ 30–50 ಸಾವಿರ ಟನ್‌, ಗೋವಾದಲ್ಲಿ 6–8 ಸಾವಿರ ಟನ್‌, ಅಸ್ಸಾಂನಲ್ಲಿ 20–25 ಸಾವಿರ ಟನ್‌ ಹಾಗೂ ಮಹಾರಾಷ್ಟ್ರ ಸೇರಿ ಇತರೆ ಕೆಲವು ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಅಡಿಕೆ ಬೆಳೆಯಲಾಗುತ್ತದೆ.

ರಾಜ್ಯದ ಶೇ 60ಕ್ಕೂ ಹೆಚ್ಚು ಪ್ರಮಾಣದ ಅಡಿಕೆಯನ್ನು ದಾವಣಗೆರೆ–ಚಿತ್ರದುರ್ಗ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತದೆ. ಮಲೆನಾಡಿನ ಕೆಂಪಡಿಕೆ ಗುಣಮಟ್ಟಕ್ಕೆ ಹೆಸರಾಗಿದೆ. ಹಾಗಾಗಿ, ಮಾರುಕಟ್ಟೆಯಲ್ಲಿ ಇತರೆ ಪ್ರದೇಶದ ಅಡಿಕೆಗಿಂತ ಧಾರಣೆ ತುಸು ಹೆಚ್ಚು. ಇಲ್ಲಿನ ಬೆಳೆಗಾರರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ‘ಅಡಿಕೆ ಕ್ಯಾನ್ಸರ್‌ಕಾರಕ’ ಎಂಬ ಹೇಳಿಕೆಯಿಂದ ಮತ್ತೆ ಕಂಗಾಲಾಗಿದ್ದಾರೆ. ಬಜೆಟ್‌ ನಂತರ ಧಾರಣೆ ಏರಿಕೆ ಕಂಡು ಸ್ಥಿರತೆಯತ್ತ ಸಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ADVERTISEMENT

‘ಅಡಿಕೆ ಎರಡು ವರ್ಷಗಳಿಂದ ದರ ಏರಿಳಿತ ಕಾಣುತ್ತಲೇ ಇದೆ. ಹಿಂದೆ ಕ್ವಿಂಟಲ್‌ಗೆ ₹ 1 ಲಕ್ಷದ ಗಡಿ ಸಮೀಪಿಸಿದ್ದರಿಂದ ಮಧ್ಯವರ್ತಿಗಳಿಗೆ ಲಾಭವಾಗಿತ್ತು. ನಂತರ ಬೆಲೆ ಕುಸಿದಿದೆ. ಧಾರಣೆ ಅನಿಶ್ಚಿತತೆಯಿಂದ ಅಡಿಕೆ ಮಾರಲು ಹಿಂದೇಟು ಹಾಕುತ್ತಾರೆ’ ಎನ್ನುತ್ತಾರೆ ಕೋಡಿಹಳ್ಳಿಯ ರೈತ ರುದ್ರಯ್ಯ.

‘ಮೊದಲಿನಿಂದಲೂ ಸಿಗರೇಟ್‌ ಕಂಪನಿಗಳು ಗುಟ್ಕಾ ನಿಷೇಧಕ್ಕೆ ಒತ್ತಾಯಿಸುತ್ತಲೇ ಬಂದಿವೆ. ಅದರಲ್ಲಿ ಯಶಸ್ಸೂ ಕಂಡಿವೆ. ಆದರೂ ಅಡಿಕೆ ವಹಿವಾಟಿಗೆ ಧಕ್ಕೆಯಾಗಿಲ್ಲ. ಐದಾರು ವರ್ಷಗಳಿಂದ ಇಂತಹ ಗುಮ್ಮ ಇರಲಿಲ್ಲ. ಈಗ ಮತ್ತೆ ಆರಂಭವಾಗಿದೆ. ಕೇಂದ್ರ ಸರ್ಕಾರ ಈ ಕುರಿತು ಅಧಿಕೃತ ಸಂಸ್ಥೆಯಿಂದ ಸಂಶೋಧನೆ ನಡೆಸಬೇಕು’ ಎಂದು ಒತ್ತಾಯಿಸುತ್ತಾರೆ ಚನ್ನಗಿರಿ ತುಮ್‌ಕೋಸ್‌ ಅಧ್ಯಕ್ಷ ಶಿವಕುಮಾರ್.

‘ಇಂತಹ ಹೇಳಿಕೆಗಳು ಧಾರಣೆ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ಕೆಲವು ಮಧ್ಯವರ್ತಿಗಳು ಇಂತಹ ಸ್ಥಿತಿಯ ಲಾಭ ಮಾಡಿಕೊಳ್ಳಲು ನೋಡುತ್ತಾರೆ’ ಎನ್ನುತ್ತಾರೆ ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಕಾರ್ಯದರ್ಶಿ ಕೆ.ಸಿ. ಮಲ್ಲಿಕಾರ್ಜುನ.

ಭವಿಷ್ಯಕ್ಕೆ ಉತ್ತಮವಲ್ಲ: ‘ಮಂಗಳೂರು ಅಡಿಕೆ ಮಾರುಕಟ್ಟೆಯು ಆರು ತಿಂಗಳಿನಿಂದ ಏರುಗತಿಯಲ್ಲಿ ಇಲ್ಲ. ಆದರೆ, ಹೇಳಿಕೆಯು ಮಾರುಕಟ್ಟೆಯ ಸಹಜಸ್ಥಿತಿಗೆ ಧಕ್ಕೆ ಉಂಟು ಮಾಡಿಲ್ಲ. ಏಕೆಂದರೆ, ಅಡಿಕೆಯ ವಿರುದ್ಧ ಲಾಬಿಯೊಂದು ನಿರಂತರವಾಗಿ ಕೆಲಸ ಮಾಡುತ್ತಲೇ ಇದೆ’ ಎನ್ನುತ್ತಾರೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ ಆಚಾರ್.

‘ಸ್ವಲ್ಪ ಅಡಿಕೆ ತಿಂದರೆ ಅದರಲ್ಲಿ ಔಷಧೀಯ ಗುಣವಿದೆ. ಆದರೆ, ಅತಿಯಾಗಬಾರದು’ ಎನ್ನುವುದು ಸಂಶೋಧಕ ಡಾ.ವಾರಣಾಸಿ ಕೃಷ್ಣಮೂರ್ತಿ ಕಿವಿಮಾತು.

‘ಅಡಿಕೆ ದಾಸ್ತಾನು ಮಾಡುವಾಗ ಪಾಸ್ಪೇನ್ ಎಂಬ ಕೀಟನಾಶಕವನ್ನು ಬಳಸುತ್ತಾರೆ. ಇದು ಅಡಿಕೆ ಸೇವಿಸುವವರ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಆದರೆ, ಅಡಿಕೆ ತಿನ್ನುವ ಹವ್ಯಾಸ ಹೊಂದಿದವರು ಯಾರೂ ತ್ಯಜಿಸಿದ್ದನ್ನು ಕಂಡಿಲ್ಲ. ಹೀಗಾಗಿ, ಹೇಳಿಕೆಯು ಮಾರುಕಟ್ಟೆಯ ಮೇಲೆ ಯಾವುದೇ ಪ್ರಭಾವ ಬೀರುವ ಸಾಧ್ಯತೆ ಇಲ್ಲ’ ಎನ್ನುವ ಆಶಾವಾದ ಅವರದು.

ಅಪ್‌ಡೇಟ್‌ ಆಗದ ಮಾಹಿತಿ?

ಶಿರಸಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹಳೆಯ ಮಾಹಿತಿಯನ್ನೇ ಆಧರಿಸಿ ಲೋಕಸಭೆಯಲ್ಲಿ ಹೇಳಿಕೆ ನೀಡಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಆರೋಗ್ಯ ಸಚಿವಾಲಯದ ಮಾಹಿತಿ ಅಪ್‌ಡೇಟ್ ಆಗಿಲ್ಲ ಎಂದು ಅಡಿಕೆ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಡಿಕೆ ವಹಿವಾಟು ನಡೆಸುವ ಸಂಸ್ಥೆಗಳ ವಿಶೇಷ ಮುತುವರ್ಜಿಯಿಂದ, ಕಾಸರಗೋಡಿನ ಸಿಪಿಸಿಆರ್‌ಐ ಮೂಲಕ ಅಡಿಕೆ ಬಗ್ಗೆ ಸಂಶೋಧನೆ ನಡೆಸಿ, ವಿಶೇಷ ವರದಿ ಸಿದ್ಧಪಡಿಸಲಾಗಿದೆ. ಈ ವರದಿಯು, ಅಡಿಕೆ ಕ್ಯಾನ್ಸರ್‌ಕಾರಕವಲ್ಲ, ಅಡಿಕೆ ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ಸ್ಪಷ್ಟಪಡಿಸಿದೆ ಎನ್ನುತ್ತಾರೆ ಶಿರಸಿ ಟಿಎಸ್‌ಎಸ್‌ನ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ.

‘ಕ್ಯಾಂಪ್ಕೊ, ಟಿಎಸ್‌ಎಸ್‌, ಮ್ಯಾಮ್ಕೊಸ್, ತುಮ್ಕೋಸ್ ಚನ್ನಗಿರಿ, ಅಡಿಕೆ ಮಾರಾಟ ಸಹಕಾರ ಮಹಾಮಂಡಳ ಈ ಎಲ್ಲ ಸಂಸ್ಥೆಗಳ ಪ್ರಮುಖರು ಜಂಟಿಯಾಗಿ, ಕಳೆದ ಏಪ್ರಿಲ್‌ನಲ್ಲಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ, ಈ ವರದಿ ಸಲ್ಲಿಸಿದ್ದರು. ಈ ಸಂಬಂಧ ತಜ್ಞರ ಸಮಿತಿ ರಚಿಸಿ, ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವುದಾಗಿ ಸಚಿವರು ಆಗ ಭರವಸೆ ನೀಡಿದ್ದರು. ಹೊಸ ಸರ್ಕಾರ ರಚನೆಯಾದ ಮೇಲೆ ಸಚಿವರು ಬದಲಾಗಿದ್ದಾರೆ. ಈ ವರದಿ ಅವರನ್ನು ತಲುಪಿರುವುದು ಅನುಮಾನ. ಹೀಗಾಗಿ, ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿಕುಮಾರ್ ಚೌಬೆ ಹಳೆಯ ಕಡತದಲ್ಲಿರುವ ಮಾಹಿತಿಯನ್ನೇ ಪುನರುಚ್ಚರಿಸಿರುವ ಸಾಧ್ಯತೆಯಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಗುಟ್ಕಾ’ ಲಾಬಿ

ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರದಲ್ಲಿ ಅಡಿಕೆಗೆ ದೊಡ್ಡ ಮಾರುಕಟ್ಟೆ ಇದೆ. ವರ್ಷಕ್ಕೆ ಲಕ್ಷ ಕ್ವಿಂಟಲ್‌ಗೂ ಹೆಚ್ಚು ಅಡಿಕೆ ಈ ಮಾರುಕಟ್ಟೆಗೆ ಬರುತ್ತದೆ. ಅಡಿಕೆಯ ಕ್ಯಾನ್ಸರ್‌ಕಾರಕ ಅಂಶ ಚರ್ಚೆಗೆ ಬಂದಾಗಲೆಲ್ಲ ಬೆಳೆಗಾರರಲ್ಲಿ ನಡುಕ ಶುರುವಾಗುತ್ತದೆ.

‘ಅಡಿಕೆಯಲ್ಲಿ ಕ್ಯಾನ್ಸರ್‌ ಅಂಶ ಇಲ್ಲ ಎಂಬುದು ವೈಜ್ಞಾನಿಕ ಸಂಶೋಧನೆಯಿಂದ ತಿಳಿದಿದೆ. ಗುಟ್ಕಾ ಕಂಪನಿಗಳ ಲಾಬಿಗೆ ಮಣಿದು ಇಂತಹ ವಿಷಯಗಳು ಚರ್ಚೆಗೆ ಬರುತ್ತವೆ. ಇದರಿಂದ ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಕಡಿಮೆಯಾಗಿದೆ’ ಎಂಬುದು ದಲಾಲರಾದ ಬಿ.ಆರ್‌.ಈಶ್ವರಪ್ಪ ಅನುಭವ.

ಬೆಳೆಗಾರರರಿಗೆ ಆತಂಕ ಬೇಡ: ಸಿದ್ದೇಶ್ವರ

ನವದೆಹಲಿ: ಅಡಿಕೆ ಸೇವನೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಗಂಟಲು, ಅನ್ನನಾಳ, ಬಾಯಿ ಮತ್ತಿತರ ಅಂಗಗಳ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಅಂಶಗಳು ಅಡಿಕೆಯಲ್ಲಿರುವುದಾಗಿ ಅಧ್ಯಯನ ವರದಿಗಳು ತಿಳಿಸಿವೆ ಎಂದು ಕೇಂದ್ರ ಸಚಿವ ಅಶ್ವಿನಿಕುಮಾರ್ ಚೌಬೆ ಲೋಕಸಭೆಗೆ ತಿಳಿಸಿದ್ದಾರೆ.

ಗುಜರಾತ್‌ನ ಖೇಡಾ ಕ್ಷೇತ್ರದ ಸದಸ್ಯ ದೇವುಸಿಂಗ್‌ ಚೌಹಾಣ್‌ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಅಡಿಕೆಯು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಕಾಯ್ದೆ ಮತ್ತು ನಿಯಮದಡಿ ಒಳಪಟ್ಟಿದೆ ಎಂದು ವಿವರಿಸಿದ್ದಾರೆ.

ಗುಟ್ಕಾ, ಸಿಹಿ ಅಡಿಕೆ, ಪರಿಮಳಯುಕ್ತ ಅಡಿಕೆಯ ಉತ್ಪನ್ನಗಳು ಮತ್ತು ತಂಬಾಕನ್ನು ಈ ನಿಯಮಗಳಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿಲ್ಲ. ಅಡಿಕೆ ಉತ್ಪನ್ನಗಳು ಸೇರಿದಂತೆ ಯಾವುದೇ ಆಹಾರ ಉತ್ಪನ್ನಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಬಳಸುವುದನ್ನು ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಮಾರಾಟ ನಿಷೇಧ ಮತ್ತು ನಿರ್ಬಂಧ) ನಿಯಮಗಳ ನಿಬಂಧನೆ ಅಡಿ ನಿಷೇಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಂಬಾಕು ಹೊಂದಿರದ ಸುವಾಸನೆಯ ಅಡಿಕೆ ಉತ್ಪನ್ನಗಳ ಮಾರಾಟ ಮತ್ತು ಬಳಕೆಯ ಮೇಲೆ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿಷೇಧ ವಿಧಿಸಿರುವ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ಕ್ಕೆ ಯಾವುದೇ ಮಾಹಿತಿ ಇಲ್ಲ. ಅಲ್ಲದೆ, ಅಡಿಕೆ ಮತ್ತು ಸಂಬಂಧಿತ ಪದಾರ್ಥಗಳ ಪೊಟ್ಟಣಗಳ ಮೇಲೆ ‘ಅಡಿಕೆ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ’ ಎಂಬ ಎಚ್ಚರಿಕೆಯ ಜಾಹೀರಾತು ಪ್ರಕಟಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

**

ಬೆಳೆಗೂ ಚರಿತ್ರೆ ಇದೆ. ರಾಜರ ಕಾಲದಿಂದ ಕರ್ನಾಟಕದಲ್ಲಿ ಇದನ್ನು ಬೆಳೆಯಲಾಗುತ್ತಿದೆ. ತಾಂಬೂಲಕ್ಕೆ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ವಿನಾ ಕಾರಣ ಅಡಿಕೆಯಲ್ಲಿ ಹಾನಿಕಾರಕ ಅಂಶಗಳಿವೆ ಎಂಬ ಸುಳ್ಳು ಬಿತ್ತಲಾಗುತ್ತಿದೆ.
– ಎಚ್‌.ಎಸ್‌.ಅನಂತರಾಜ್‌,ಅಡಿಕೆ ಬೆಳೆಗಾರ, ಮಾರಘಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.