ಅರ್ಕಾವತಿ ನದಿ
ನವದೆಹಲಿ: ಅರ್ಕಾವತಿ ನದಿ ನೀರಿನ ಮಾದರಿಗಳಲ್ಲಿ ಭಾರ ಲೋಹಗಳು, ವಿಷಕಾರಿ ಅಂಶಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ನೋಟಿಸ್ ಜಾರಿ ಮಾಡಿದೆ.
ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಪೀಠವು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆ, ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿ ನೋಟಿಸ್ ನೀಡಿದೆ.
ಈ ನದಿಯು ಕೃಷಿ ಹಾಗೂ ತೋಟಗಾರಿಕಾ ಚಟುವಟಿಕೆಗಳಿಗೆ ಪ್ರಮುಖ ಮೂಲವಾಗಿದೆ. ಅರ್ಕಾವತಿ ನದಿ ಮಾಲಿನ್ಯ ತಡೆಗಟ್ಟಿ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ 20 ವರ್ಷಗಳ ಹಿಂದೆಯೇ ಆದೇಶ ನೀಡಿದೆ. ಆದರೆ, ಕೊಳಚೆ ನೀರು ವ್ಯಾಪಕ ಪ್ರಮಾಣದಲ್ಲಿ ಜಲಮೂಲ ಸೇರುತ್ತಿದೆ. ನದಿಯಲ್ಲಿ ಭಾರವಾದ ಲೋಹಗಳು, ಹೆಚ್ಚಿನ ಮಟ್ಟದ ಪಾದರಸ, ವಿಷಕಾರಿ ವಸ್ತುಗಳು, ಡಿಡಿಟಿ ಕೀಟನಾಶಕದ ಅಂಶಗಳು, ಕ್ಯಾನ್ಸರ್‌ಗೆ ಕಾರಣವಾಗುವ ಪಾಲಿಸೈಕ್ಲಿಕ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು ಕಂಡುಬಂದಿವೆ ಎಂದು ಎನ್‌ಜಿಟಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ನಂದಿ ಬೆಟ್ಟದಲ್ಲಿ ಹುಟ್ಟುವ ಈ ನದಿಯು ವೃಷಭಾವತಿಗೆ ಸೇರುವ ತನಕ ಮಲಿನಗೊಳ್ಳುತ್ತಲೇ ಸಾಗಿದೆ. ಬೆಂಗಳೂರಿನ ಬಹುತೇಕ ಕೊಳಚೆ ನೀರು ಈ ನದಿಯಲ್ಲೇ ಹರಿದು ಹೋಗುತ್ತದೆ. ತಿಪ್ಪಗೊಂಡನಹಳ್ಳಿ ಜಲಾಶಯದ ಆಸುಪಾಸು, ದೊಡ್ಡ ಮುದವಾಡಿ ಸೇತುವೆ ಸೇರಿದಂತೆ ಮೂರು ಕಡೆಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದಾಗ ಈ ಮಾಹಿತಿ ಹೊರಬಿದ್ದಿದೆ. ಯುರೋಪಿಯನ್ ಒಕ್ಕೂಟ ನಿಗದಿಪಡಿಸಿದ ನೀರಿನ ಗುಣಮಟ್ಟದ ಮಾನದಂಡಗಳಿಗಿಂತ ಇಲ್ಲಿ ಡಿಡಿಟಿ ಪ್ರಮಾಣವು 75 ಪಟ್ಟು ಹೆಚ್ಚಾಗಿದೆ ಎಂದು ಪೀಠ ಹೇಳಿದೆ.
ಪ್ರಕರಣವನ್ನು ದಕ್ಷಿಣ ವಲಯ ಪೀಠಕ್ಕೆ ವರ್ಗಾಯಿಸಿರುವ ಪ್ರಧಾನ ಪೀಠವು ವಿಚಾರಣೆಯನ್ನು ಫೆಬ್ರುವರಿ 10ಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.