ADVERTISEMENT

ಜಾಸ್ತಿ ಮಾತನಾಡಿದರೆ ‘ಶೂಟ್ ಮಾಡ್ತೀನಿ’

ಹೊರಟ್ಟಿ, ನಿವೃತ್ತ ಕೆಎಎಸ್ ಅಧಿಕಾರಿ, ಹಾವೇರಿಯ ವ್ಯಕ್ತಿಗೂ ಸೈನಿಕ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:23 IST
Last Updated 23 ಜೂನ್ 2019, 19:23 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಹಾವೇರಿ: ‘ಜಾಸ್ತಿ ಮಾತಾಡಿದ್ರೆ ಶೂಟ್ ಮಾಡ್ಬಿಡ್ತೀನಿ’ ಎಂದುವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ರೈಲಿನಲ್ಲಿ ಜೀವಬೆದರಿಕೆ ಹಾಕಿದ್ದಲ್ಲದೇ, ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಹಾವೇರಿಯ ಮಲ್ಲಿಕಾರ್ಜುನ ಎಂಬುವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಾರಿಯಾಗಿರುವ ಸೈನಿಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಸಂಬಂಧ ಹೊರಟ್ಟಿ ಜೂನ್ 18ರಂದು ರೈಲ್ವೆ ಠಾಣೆಗೆ ದೂರು ಕೊಟ್ಟಿದ್ದು, ಬೆಂಗಳೂರು ಹಾಗೂ ಹುಬ್ಬಳ್ಳಿ ಪೊಲೀಸರು ಜಂಟಿಯಾಗಿ ತನಿಖೆಪ್ರಾರಂಭಿಸಿದ್ದಾರೆ. ‘ಆರೋಪಿಯ ಹೆಸರು ರೋಹಿತ್ ಪಟ್ಟೇದ್ ಮರಾಠ. ಅವರು ಬೆಳಗಾವಿ ರೆಜಿಮೆಂಟ್‌ನವರು ಎಂದು ಗೊತ್ತಾಗಿದೆ. ಈ ಬಗ್ಗೆ ಅಲ್ಲಿನ ಅಧಿಕಾರಿಗಳಿಂದಲೂ ಮಾಹಿತಿ ಕೋರಿದ್ದೇವೆ’ ಎಂದು ಪೊಲೀಸರು ಹೇಳಿದರು.ಹೊರಟ್ಟಿ ಅವರು ಜೂನ್ 14ರಂದುರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಆಗಿದ್ದೇನು: ‘ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ನಾನು ಮೊಬೈಲ್‌ನಲ್ಲಿ ಕಾರ್ಯಕ್ರಮವೊಂದರ ವಿಡಿಯೊ ನೋಡುತ್ತಿದ್ದೆ. ಆಗ ಮೇಲಿನ ಸೀಟಿನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬ, ‘ಸೌಂಡ್ ಕಡಿಮೆ ಮಾಡಿ’ ಎಂದ. ಆನಂತರ ಮೊಬೈಲ್ ಬಂದ್ ಮಾಡಿದೆ. ಸ್ವಲ್ಪ ಸಮಯದ ಬಳಿಕ ಪುನಃ ಆತ ಲೈಟ್ ಆಫ್ ಮಾಡುವಂತೆ ಹೇಳಿ ವಿನಾ ಕಾರಣ ಜಗಳ ಪ್ರಾರಂಭಿಸಿದ‌’ ಎಂದು ಹೊರಟ್ಟಿ ಹೇಳಿದ್ದಾರೆ.

ADVERTISEMENT

‘ರಾತ್ರಿ 1 ಗಂಟೆವರೆಗೆ ಅವರ ಜತೆಗೂ ಗಲಾಟೆ ಮಾಡಿದ್ದ ಆ ವ್ಯಕ್ತಿ, ಎಲ್ಲರ ನೆಮ್ಮದಿಗೆ ಭಂಗವುಂಟು ಮಾಡಿದ್ದ. ಹೀಗಾಗಿ, ಟಿಟಿಇ ಬಳಿ ಆತನ ಹೆಸರು–ವಿಳಾಸದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮುಂದಾದೆ. ಆಗ, ‘ಏಯ್, ಬ್ಲಡಿ ಪೊಲಿಟೀಷಿಯನ್. ನಾನು ಮನಸ್ಸು ಮಾಡಿದ್ರೆಇಲ್ಲೇ ಶೂಟ್ ಮಾಡಿ ಸಾಯಿಸಬಹುದು. ಹೆಸರು ತೆಗೆದುಕೊಂಡು ಅದೇನ್ ಮಾಡ್ಕೋತಿಯೋ ಮಾಡ್ಕೊ’ ಎಂದು ಕೂಗಾಡಿ ಹುಬ್ಬಳ್ಳಿ ನಿಲ್ದಾಣದಲ್ಲಿ ಇಳಿದು ಹೋದ. ಈತ ನಿಜವಾಗಿಯೂ ಸೈನಿಕನೇನಾ ಎಂಬುದು ಗೊತ್ತಾಗಬೇಕಿದೆ.ಹೀಗಾಗಿ, ಆ ವ್ಯಕ್ತಿಯನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು‌’ ಎಂದು ಬಸವರಾಜ ಹೊರಟ್ಟಿ ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.