
ಬೆಂಗಳೂರು: ಗೂಂಡಾ ಕಾಯ್ದೆಯಡಿ ಬಂಧಿಸಿದ ಕ್ರಮವನ್ನು ಪ್ರಶ್ನಿಸಿದ್ದ ಕೆಜಿಎಫ್‌ನ ಶರತ್ ಅಲಿಯಾಸ್ ಶರತ್ ಕುಮಾರ್ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ‘ಮುನ್ನೆಚ್ಚರಿಕೆ ಬಂಧನದ ಉದ್ದೇಶವೇ ಸಮಾಜದಲ್ಲಿ ಶಾಂತಿಯ ಸ್ಥಾಪನೆ’ ಎಂದು ಸ್ಪಷ್ಟಪಡಿಸಿದೆ.
‘ನನ್ನ ಪತಿಯನ್ನು ಅಕ್ರಮವಾಗಿ ಬಂಧಿಸಲಾಗಿದೆ’ ಎಂದು ಆರೋಪಿಸಿ ಶರತ್ ಅಲಿಯಾಸ್ ಶರತ್ ಕುಮಾರ್ ಪತ್ನಿ ನಂದಿನಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಕುರಿತಂತೆ ಆದೇಶಿಸಿದೆ.
‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ನೀಡಿರುವ ವರದಿಯ ಪ್ರಕಾರ ಬೆಂಗಳೂರು ಮಹಾನಗರದಲ್ಲಿ ಅಪರಾಧ ಚಟುವಟಿಕೆಗಳು ದಿನೇ ದಿನೇ ಹೆಚ್ಚಾಗುತ್ತಿವೆ ಮತ್ತು ಶರತ್ ಕುಮಾರ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 45 ಪ್ರಕರಣ ಇವೆ’ ಎಂಬುದನ್ನು ಗಂಭೀರವಾಗಿ ಉಲ್ಲೇಖಿಸಿರುವ ನ್ಯಾಯಪೀಠ, ‘ಬಂಧಿತನ ಕ್ರಿಮಿನಲ್ ಹಿನ್ನೆಲೆ ಗಮನಿಸಿದರೆ ರಾಜ್ಯ ಪ್ರಾಸಿಕ್ಯೂಷನ್ ಹೇಳಿಕೆಯನ್ನು ಸಮರ್ಥಿಸಬೇಕಾಗುತ್ತದೆ’ ಎಂದು ತಿಳಿಸಿದೆ.
‘ಮಹಿಳೆಯರು, ಮಕ್ಕಳು ಮತ್ತು ವಯೋವೃದ್ಧರ ರಕ್ಷಣೆಗೆ ಹೆಚ್ಚಿನ ಕಣ್ಗಾವಲು ಅತ್ಯಗತ್ಯ. ಹಾಗಾಗಿ, ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಬಂಧನದಂತಹ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ. ಹೀಗಾಗಿ, ಈ ಪ್ರಕರಣದಲ್ಲಿ ಗೂಂಡಾ ಕಾಯ್ದೆ–1985ರ ಅಡಿಯಲ್ಲಿ ಶರತ್ ಕುಮಾರ್ ಬಂಧನ ಮಾಡಿರುವ ಕ್ರಮ ಸರಿಯಾಗಿಯೇ ಇದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಶರತ್ ಅವರನ್ನು ಒಂದು ವರ್ಷದವರೆಗೆ ಬಂಧನದಲ್ಲಿ ಇರಿಸುವಂತೆ ಕೋಲಾರ ಜಿಲ್ಲಾಧಿಕಾರಿ 2024ರ ಏಪ್ರಿಲ್ 4ರಂದು ಆದೇಶಿಸಿದ್ದರು. 2024ರ ಮೇ 3ರಂದು ರಾಜ್ಯ ಸರ್ಕಾರ ಈ ಆದೇಶವನ್ನು ದೃಢಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.