ADVERTISEMENT

ಅಂಬೇಡ್ಕರ್‌ ಇಚ್ಛೆಗೆ ವಿರುದ್ಧವಾಗಿ ನಡೆದ ನೆಹರೂ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 15:28 IST
Last Updated 6 ಜುಲೈ 2025, 15:28 IST
ಶ್ಯಾಮ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಿ.ಎಸ್‌.ಯಡಿಯೂರಪ್ಪ, ಛಲವಾದಿ ನಾರಾಯಣಸ್ವಾಮಿ
ಶ್ಯಾಮ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಿ.ಎಸ್‌.ಯಡಿಯೂರಪ್ಪ, ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ‘ನೆಹರೂ ಅವರು ಡಾ.ಬಿ.ಆರ್‌.ಅಂಬೇಡ್ಕರ್ ಅವರನ್ನು ದೂರವಿಟ್ಟು ತಮ್ಮ ಅವಶ್ಯಕತೆ ಮತ್ತು ಓಲೈಕೆ ರಾಜಕಾರಣಕ್ಕಾಗಿ ಸಂವಿಧಾನದಲ್ಲಿ 370 ನೇ ವಿಧಿಯನ್ನು ಸೇರಿಸಿದರು. ಮೂಲ ಸಂವಿಧಾನದಲ್ಲಿ 370ನೇ ವಿಧಿ ಇರಲಿಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಭಾರತೀಯ ಜನಸಂಘದ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಪ್ರಯುಕ್ತ ಜಗನ್ನಾಥ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶ್ಯಾಮಪ್ರಸಾದ್ ಮುಖರ್ಜಿ ಮತ್ತು ಅಂಬೇಡ್ಕರ್ ಅವರು ಜೊತೆ ಜೊತೆಯಲ್ಲಿ ಕೆಲಸ ಮಾಡಿದವರು. ಅಂಬೇಡ್ಕರ್ ಮತ್ತು ಮುಖರ್ಜಿ ಕಾಂಗ್ರೆಸ್ಸೇತರ ಮುಖಂಡರು. ಮೊದಲ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. 370ನೇ ವಿಧಿ ಸೇರಿಸಿದ ದಿನದಿಂದಲೇ ಮುಖರ್ಜಿ ಅವರು ಅದರ ವಿರುದ್ಧ ಹೋರಾಟ ಆರಂಭಿಸಿದರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದರು’ ಎಂದರು.

ADVERTISEMENT

‘ಮುಖರ್ಜಿ ಆ ಕಾಲಘಟ್ಟದಲ್ಲಿ ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದರು. ಶಿಕ್ಷಣ ತಜ್ಞ, ಹೋರಾಟಗಾರ ಮತ್ತು ಸಮಾಜಸೇವಕರೂ ಆಗಿದ್ದರು. ಬ್ರಿಟಿಷರ ವಿರುದ್ಧ ನಡೆದ ಕ್ವಿಟ್‌ ಇಂಡಿಯಾ ಚಳವಳಿಯ ರೂವಾರಿಯಾಗಿ ಬಹುದೊಡ್ಡ ಹೋರಾಟವನ್ನು ರೂಪಿಸಿದ್ದರು’ ಎಂದು ಅವರು ಹೇಳಿದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ‘ಮುಖರ್ಜಿ ಅವರು ದೇಶದ ಏಕತೆ, ಸಮಗ್ರತೆ ಮತ್ತು ಸಾಂಸ್ಕೃತಿಕ ಹಿರಿಮೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶ್ರೇಷ್ಠ ರಾಷ್ಟ್ರೀಯ ನಾಯಕ. ನಮ್ಮ ಪಕ್ಷಕ್ಕೆ ಸೈದ್ಧಾಂತಿಕ ಅಡಿಪಾಯ ಹಾಕಿಕೊಟ್ಟ ಭಾರತೀಯ ಜನಸಂಘದ ಸ್ಥಾಪಕ’ ಎಂದು ಹೇಳಿದರು.

‘ದೇಶದ ರಾಜಕಾರಣದಲ್ಲಿ ಒಂದು ಬಲಿಷ್ಠ ರಾಷ್ಟ್ರೀಯವಾದಿ ಸಿದ್ಧಾಂತ ಇರುವ ರಾಜಕೀಯ ಪರಿವಾರಕ್ಕೆ ನಾಂದಿ ಹಾಡಿದವರು. 370ನೇ ವಿಧಿಯನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಒಗ್ಗೂಡಿಸಲು ಗಟ್ಟಿಯಾಗಿ ನಿಂತು, ಅದಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಧೀಮಂತ ನಾಯಕ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.