ADVERTISEMENT

ಅರ್ಜಿಗಿಲ್ಲ ಮನ್ನಣೆ, ಶಿಫಾರಸಿಗೆ ಮಣೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯ್ದ ಸಂಘ–ಸಂಸ್ಥೆಗಳಿಗೆ ನೇರವಾಗಿ ಆರ್ಥಿಕ ನೆರವು

ವರುಣ ಹೆಗಡೆ
Published 7 ಏಪ್ರಿಲ್ 2025, 23:30 IST
Last Updated 7 ಏಪ್ರಿಲ್ 2025, 23:30 IST
ಕನ್ನಡ ಭವನ
ಕನ್ನಡ ಭವನ   

ಬೆಂಗಳೂರು: ಅನುದಾನದ ಕೊರತೆಯಿಂದಾಗಿ 2024–25ನೇ ಸಾಲಿಗೆ ‘ಧನಸಹಾಯ’ ಯೋಜನೆಯಡಿ ಆರ್ಥಿಕ ನೆರವು ಒದಗಿಸದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಫಾರಸುಗಳಿಗೆ ಮಣಿದು ಆಯ್ದ ಸಂಘ–ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿ ಅನುದಾನ ನೀಡಿದೆ. 

ನಾಡಿನ ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಸಂವರ್ಧನೆ ‘ಧನಸಹಾಯ’ ಯೋಜನೆಯ ಆಶಯವಾಗಿದೆ. ಸಾಂಸ್ಕೃತಿಕ ವಾತಾವರಣ ನಿರ್ಮಿಸಲು ಶ್ರಮಿಸುತ್ತಿರುವ ಸಂಘ–ಸಂಸ್ಥೆಗಳಲ್ಲಿ ಹೆಚ್ಚಿನವು ಇಲಾಖೆಯ ಧನಸಹಾಯವನ್ನೇ ನಂಬಿಕೊಂಡು, ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಅಸಂಘಟಿತ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷ ಭೂಷಣಗಳ ಖರೀದಿಗೆ ಈ ಯೋಜನೆ ಸಹಕಾರಿಯಾಗಿದೆ. ಯೋಜನೆಗೆ ನಿಗದಿತ ಅನುದಾನ ಇರದ ಕಾರಣ ಇಲಾಖೆಯು 2024–25ನೇ ಸಾಲಿಗೆ ಧನಸಹಾಯ ನೀಡುವ ಪ್ರಕ್ರಿಯೆ ನಡೆಸಿಲ್ಲ. ಆದರೆ, ಇದೇ ವೇಳೆ 60ಕ್ಕೂ ಅಧಿಕ ಸಂಘ–ಸಂಸ್ಥೆಗಳಿಗೆ ₹5 ಕೋಟಿಗೂ ಅಧಿಕ ಅನುದಾನವನ್ನು ನೇರವಾಗಿ ನೀಡಲಾಗಿದೆ. 

ಅನುದಾನದ ಕೊರತೆಯಿಂದ ಇಲಾಖೆಯು 2023–24ನೇ ಸಾಲಿನ ಧನಸಹಾಯವನ್ನು ಇದೇ ಮೊದಲ ಬಾರಿ ನಾಲ್ಕು ಕಂತುಗಳಲ್ಲಿ ನೀಡಿತ್ತು. 2024–25ನೇ ಸಾಲಿನ ಧನಸಹಾಯವನ್ನು ಈ ಹಿಂದಿನಂತೆ ಒಂದೇ ಬಾರಿ ನೀಡಲಾಗುತ್ತದೆ ಎಂಬ ಭರವಸೆಯಲ್ಲಿ ಸಂಘ–ಸಂಸ್ಥೆಗಳು ಕಾರ್ಯಕ್ರಮಗಳನ್ನು ನಡೆಸಿದ್ದವು. ಆದರೆ, ಅನುದಾನ ನೀಡದಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.  

ADVERTISEMENT

ಅರ್ಜಿ ಸಲ್ಲಿಸದಿದ್ದರೂ ಅನುದಾನ: ಧನಸಹಾಯ ಯೋಜನೆಯಡಿ ಅನುದಾನ ಪಡೆಯಲು ನೋಂದಾಯಿತ ಸಂಘ–ಸಂಸ್ಥೆಗಳು ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕು. ಜತೆಗೆ, ನಡೆಸಿರುವ ಕಾರ್ಯಕ್ರಮಗಳ ಬಗ್ಗೆ ಅಗತ್ಯ ದಾಖಲಾತಿಗಳ ಸ್ಕ್ಯಾನ್‌ ಮಾಡಿದ ಪ್ರತಿಗಳನ್ನು ಒದಗಿಸಬೇಕು. ಇಲಾಖೆಯ ವಲಯ ಜಂಟಿ ನಿರ್ದೇಶಕರ ಅಧ್ಯಕ್ಷತೆಯ ಜಿಲ್ಲಾ ಸಮಿತಿಯು ಸಂಘ–ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ, ಅಗತ್ಯ ಅನುದಾನಕ್ಕೆ ಶಿಫಾರಸು ಮಾಡಲಿದೆ. ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುತ್ತಿರುವ ಸಂಘ–ಸಂಸ್ಥೆಗಳಿಗೆ ಮಾತ್ರ, ವಿಶೇಷ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವ ಅಧಿಕಾರ ಸರ್ಕಾರಕ್ಕಿದೆ ಎಂದು ಧನಸಹಾಯ ಮಾರ್ಗಸೂಚಿ ಹೇಳುತ್ತದೆ. ಈ ಅವಕಾಶದಡಿ ವಿವಿಧ ಸಂಘ–ಸಂಸ್ಥೆಗಳಿಗೆ ನೇರವಾಗಿ ₹92 ಲಕ್ಷ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದ ಇಲಾಖೆ, ಪ್ರತ್ಯೇಕವಾಗಿಯೂ ಉತ್ಸವ, ಕಾರ್ಯಕ್ರಮಗಳಿಗೆ ಲಕ್ಷಾಂತರ ರೂಪಾಯಿ ನೀಡಿದೆ. 

‘ಅನುದಾನದ ಕೊರತೆ ಕಾರಣ ನೀಡಿ 2024–25ನೇ ಸಾಲಿನ ಧನಸಹಾಯ ಪ್ರಕ್ರಿಯೆ ನಡೆಸದ ಇಲಾಖೆ, ಪ್ರಭಾವಿಗಳು ಹಾಗೂ ಶಿಫಾರಸು ಪತ್ರ ತಂದವರಿಗೆ ಲಕ್ಷಾಂತರ ರೂಪಾಯಿ ಅನುದಾನ ನೀಡಿರುವುದು ವಿಪರ್ಯಾಸ. ಇದರಿಂದಾಗಿ ಧನಸಹಾಯ ಯೋಜನೆಯಲ್ಲಿ ಪಾರದರ್ಶಕತೆ ಮರೆಯಾಗಲಿದೆ. ಸರ್ಕಾರದ ಈ ರೀತಿಯ ನಡೆಯಿಂದ ನಿಯಮಿತವಾಗಿ ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಿರುವ ಸಂಘ–ಸಂಸ್ಥೆಗಳು ಧನಸಹಾಯ ಯೋಜನೆಯ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿವೆ’ ಎಂದು ಕಲಾವಿದ ಜಯಸಿಂಹ ಎಸ್. ಬೇಸರ ವ್ಯಕ್ತಪಡಿಸಿದರು. 

ತಲಾ ₹1 ಕೋಟಿ ನೆರವು

ರಾಜ್ಯದಲ್ಲಿ ಏಳು ಸಾವಿರಕ್ಕೂ ಅಧಿಕ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿವೆ. ‘ಧನಸಹಾಯ’ ಯೋಜನೆಯಡಿ ಅರ್ಜಿ ಅಲ್ಲಿಸುವ ನಾಲ್ಕು ಸಾವಿರಕ್ಕೂ ಹೆಚ್ಚು ಸಂಘ–ಸಂಸ್ಥೆಗಳಲ್ಲಿ ಒಂದು ಸಾವಿರದಿಂದ 1500 ಸಂಘ–ಸಂಸ್ಥೆಗಳಿಗೆ ವಾರ್ಷಿಕ ಧನಸಹಾಯ ಒದಗಿಸಲಾಗುತ್ತಿತ್ತು. ಯೋಜನೆಯಡಿ ಗರಿಷ್ಠ ₹5 ಲಕ್ಷದವರೆಗೆ ಅನುದಾನ ಒದಗಿಸಲು ಮಾತ್ರ ಅವಕಾಶವಿದೆ. ಆದರೆ ವಿಶೇಷ ಅಧಿಕಾರದಡಿ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ನಡೆಸುವ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಟೊರಾಂಟೊದಲ್ಲಿರುವ ಕನ್ನಡ ಸಂಘದ ಸುವರ್ಣ ಸಮಾರಂಭಕ್ಕೆ ತಲಾ ₹1 ಕೋಟಿ ನೀಡಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ‘ಹೆಸರಾಯಿತು ಕರ್ನಾಟಕ ಐವತ್ತರ ಸಂಭ್ರಮ’ ಕಾರ್ಯಕ್ರಮಕ್ಕೆ ₹50 ಲಕ್ಷ ಒದಗಿಸಲಾಗಿದೆ.   ‘ವಿವೇಚನಾ ಅಧಿಕಾರದ ಅನುಸಾರ ಕೆಲ ಸಂಘ–ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಬಹುದು. ಧನಸಹಾಯದ ಮಾರ್ಗಸೂಚಿಯಲ್ಲಿ ಇದಕ್ಕೆ ಅವಕಾಶ ಇದೆ. ಅನುದಾನದ ಕೊರತೆಯಿಂದ ಈ ಬಾರಿ ಧನಸಹಾಯ ಪ್ರಕ್ರಿಯೆ ನಡೆಸಿಲ್ಲ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.