ಆಶಾ ಕಾರ್ಯಕರ್ತೆಯರು
ಕಡತ ಚಿತ್ರ
ಬೆಂಗಳೂರು: ‘ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಪ್ರೋತ್ಸಾಹಧನ ಸೇರಿಸಿ ಕನಿಷ್ಠ ₹10 ಸಾವಿರ ಗೌರವಧನ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿ ಐದು ತಿಂಗಳು ಕಳೆದರೂ ಈ ಭರವಸೆ ಈಡೇರಿಲ್ಲ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ಆಕ್ರೋಶ ವ್ಯಕ್ತಪಡಿಸಿದೆ.
ನಿಶ್ಚಿತ ಗೌರವಧನವಾಗಿ ₹15 ಸಾವಿರ ನೀಡಬೇಕೆಂದು ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಸುಮಾರು 40 ಸಾವಿರ ಆಶಾ ಕಾರ್ಯಕರ್ತೆಯರು ಇದೇ ವರ್ಷ ಜನವರಿ 7ರಿಂದ ಅನಿರ್ದಿಷ್ಟ ಹೋರಾಟ ಆರಂಭಿಸಿದ್ದರು. ಈ ಬೇಡಿಕೆಗಳಿಗೆ ಸಂಬಂಧಿಸಿದಂತೆ 10ರಂದು ಸಂಘದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದ ಮುಖ್ಯಮಂತ್ರಿ, ‘2025ರ ಏಪ್ರಿಲ್ ತಿಂಗಳಿನಿಂದ ಕನಿಷ್ಠ ₹10 ಸಾವಿರ ಗೌರವಧನ ನೀಡಲಾಗುವುದು. ಅಲ್ಲದೆ, ಹೆಚ್ಚುವರಿ ಕೆಲಸ ಆಧಾರದಲ್ಲಿ ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುವುದು. ಯಾರಿಗಾದರೂ ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದರೆ ಸರ್ಕಾರವೇ ಹೆಚ್ಚುವರಿ ಹಣ ಪಾವತಿಸಲಿದೆ’ ಎಂದು ಆಶ್ವಾಸನೆ ನೀಡಿದ್ದರು. ಆದರೆ, ಇದು ಭರವಸೆಯಾಗಿಯೇ ಉಳಿದಿದೆ ಎಂದು ಸಂಘ ದೂರಿದೆ.
‘ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ಅನುಗುಣವಾಗಿ ಸರ್ಕಾರ ತಕ್ಷಣ ಆದೇಶ ಹೊರಡಿಸಬೇಕು. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಗೌರವಧನ ₹1,000 ಹೆಚ್ಚಳ ಮಾಡಿದಂತೆ, ಆಶಾ ಕಾರ್ಯಕರ್ತೆಯರಿಗೂ ಹೆಚ್ಚಿಸಬೇಕು. ನಗರ ಪ್ರದೇಶದ ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ₹2 ಸಾವಿರದಷ್ಟು ಗೌರವಧನ ಹೆಚ್ಚಿಸಬೇಕು. ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ ₹5 ಲಕ್ಷ ನೀಡಬೇಕು, ತೀವ್ರ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳು ನಿಶ್ಚಿತ ಗೌರವಧನ ಮತ್ತು ಪ್ರೋತ್ಸಾಹಧನ ನೀಡಬೇಕು. ಪ್ರತಿವರ್ಷ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಬೇಕು. ತೀವ್ರ ಕಾಯಿಲೆಗಳಿದ್ದರೆ ಉಚಿತ ಚಿಕಿತ್ಸೆ ಒದಗಿಸಬೇಕು’ ಎಂದೂ ಸಂಘ ಆಗ್ರಹಿಸಿದೆ.
‘ಆರೋಗ್ಯ ಇಲಾಖೆಯ ಆಯುಕ್ತರು ನೀಡಿದ್ದ ಭರವಸೆಗಳ ಕಾರಣಕ್ಕೆ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿತ್ತು. ಮುಖ್ಯಮಂತ್ರಿ ತಕ್ಷಣ ಮಧ್ಯಪ್ರವೇಶಿಸಿ, ನೀಡಿರುವ ಭರವಸೆಗಳನ್ನು ಈಡೇರಿಸಲು ಆದೇಶ ಹೊರಡಿಸಬೇಕು. ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಬೀದಿಗಿಳಿದು ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲ’ ಎಂದೂ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಮತ್ತು ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.