ADVERTISEMENT

ಆಷಾಢ ಏಕಾದಶಿ: ಪಂಢರಪುರಕ್ಕೆ ಹರಿದು ಬಂದ ಭಕ್ತಸಾಗರ

ಸರ್ಕಾರಿ ಪೂಜೆ ನೆರವೇರಿಸಿದ ಮುಖ್ಯಮಂತ್ರಿ ಏಕನಾಥ ಶಿಂಧೆ ದಂಪತಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 14:09 IST
Last Updated 10 ಜುಲೈ 2022, 14:09 IST
ಆಷಾಢ ಏಕಾದಶಿ ನಿಮಿತ್ಯ ಪಂಢರಪುರದ ವಿಠ್ಠಲ-ರುಕ್ಮಿಣಿಗೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ದಂಪತಿ ಭಾನುವಾರ ನಸುಕಿನ ಸಮಯದಲ್ಲಿ ಸರ್ಕಾರಿ ಪೂಜೆ ನೆರವೇರಿಸಿದರು
ಆಷಾಢ ಏಕಾದಶಿ ನಿಮಿತ್ಯ ಪಂಢರಪುರದ ವಿಠ್ಠಲ-ರುಕ್ಮಿಣಿಗೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ದಂಪತಿ ಭಾನುವಾರ ನಸುಕಿನ ಸಮಯದಲ್ಲಿ ಸರ್ಕಾರಿ ಪೂಜೆ ನೆರವೇರಿಸಿದರು   

ಚಡಚಣ/ಹೊರ್ತಿ:ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಭಕ್ತರ ಆರಾಧ್ಯ ದೇವರಾದ ವಿಠ್ಠಲ-ರುಕ್ಷ್ಮೀಣಿ ಆಷಾಢ(ದೇವಶಯನಿ ಏಕಾದಶಿ) ನಿಮಿತ್ತ ದರ್ಶನಕ್ಕಾಗಿ ಪಂಢರಪುರದಲ್ಲಿ ಭಾನುವಾರ ಭಕ್ತರ ಮಹಾಪೂರವೇ ಹರಿದು ಬಂದಿತು.

ಜಾತಿ, ಮತ, ಪಂಥಗಳ ಬೇಧವಿಲ್ಲದೇ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ವಿವಿಧ ರಾಜ್ಯಗಳಿಂದ ಸಾಂಪ್ರದಾಯಿಕ ಸಮವಸ್ತ್ರಗಳನ್ನು ಧರಿಸಿ ಆಗಮಿಸಿದ್ದ ದಿಂಡಿ ಯಾತ್ರೆಯ ಮೂಲಕ ಪಂಢರಪುರಕ್ಕೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಆಗಮಿಸಿದ್ದರು.

ಭಗವಾಧ್ವಜ ಹಿಡಿದವಾರಕರಿಗಳು, ತುಳಸಿ ಕಟ್ಟೆ ಹೊತ್ತ ಮಹಿಳೆಯರು ಹಾಗೂ ತಾಳ, ತಂಬೂರಿ ಬಾರಿಸುತ್ತ ವಿಠ್ಠಲ ನಾಮಸ್ಮರಣೆ ಮಾಡುವ ಪಾದಯಾತ್ರೆಗಳ ಗುಂಪು ಎಲ್ಲೆಲ್ಲೂ ಕಂಡುಬಂದಿತು.

ADVERTISEMENT

ಮಳೆಯನ್ನು ಲೆಕ್ಕಿಸದೆ ಸಂತಸದಿಂದ ದೇವರ ದರ್ಶನ ಪಡೆದು ಜೈಹರಿ ವಿಠ್ಠಲ.. ಶ್ರೀ ಹರಿ ವಿಠ್ಠಲ ಎನ್ನುವ ಜಯಘೋಷದೊಂದಿಗೆ ಭೀಮಾ (ಚಂದ್ರಭಾಗ) ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಕೆಲವರು ವಿಠ್ಠಲ- ರುಕ್ಷ್ಮೀಣಿ ದೇವರ ಪಾದ ದರ್ಶನ ಮಾಡಿದರೆ, ಇನ್ನು ಕೆಲವರು ಮುಖ ದರ್ಶನ, ಇನ್ನಷ್ಟು ಭಕ್ತರು ಕಳಶ ದರ್ಶನ ಮಾಡಿದರೆ, ಇನ್ನುಳಿದ ಬಹುತೇಕರು ನಾಮದೇವ ಪೈರಿ (ಭಕ್ತ ನಾಮದೇವನ ಗದ್ದುಗೆ) ದರ್ಶನ ಪಡೆದರು.

ಏಕಾದಶಿ ನಿಮಿತ್ಯ ಜರುಗಿದ ವಾರಕರಿ ಸಪ್ತಾಹದಲ್ಲಿ ಅನೇಕ ಭಕ್ತರು ಸಂತ ಜ್ಞಾನೇಶ್ವರ, ಏಕನಾಥ, ತುಕಾರಾಮ, ಪುಂಡಲೀಕ ನಾಮದೇವ, ದಾಮಾಜಿ, ಮೀರಬಾಯಿ, ಮುಕ್ತಾಬಾಯಿ, ಕಬೀರದಾಸ, ರಾಮದಾಸ, ತುಳಸಿದಾಸ, ಸೂರದಾಸರ ಅಭಂಗಗಳನ್ನು ರಾಗದಿಂದ ಹಾಡುತ್ತಾ ಭಜನೆ, ನಾಮ ಸಂಕೀರ್ತನೆಗಳಲ್ಲಿ ಮೈ ಮರೆತಿರುವುದು ಕಂಡುಬಂದಿತು.

ಪಂಢರಪುರದಿಂದ ಸುಮಾರು 5 ಕಿ.ಮೀ ದೂರದ ಗೋಪಾಳಪುರದಲ್ಲಿ ಸಂತ ಸಕ್ಕೂಬಾಯಿ ಗೈದಿರುವ ಸೇವಾ ಕಾರ್ಯಗಳ ಚಿತ್ರಣ, ಅವಳು ಬಳಸಿದ ಬೀಸು ಕಲ್ಲಿನಲ್ಲಿ ಬೀಸುವದು, ಕುಟ್ಟುವುದು ಸಾಮಾನ್ಯವಾಗಿತ್ತು. ಅಲ್ಲಿಂದಲೇ ವಿಠ್ಠಲನ ದರ್ಶನಕ್ಕೆ ಹಾಕಲಾದ ಬ್ಯಾರಿಕೇಡ್‌ ಮೂಲಕ ಸರದಿ ಸಾಲಿನಲ್ಲಿ ಭಕ್ತರು ಸಾಗಿದರು.

8ರಿಂದ 10 ಗಂಟೆಗಳ ಕಾಲ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಈ ಬಾರಿ ಮಂದಿರದಿಂದ ಸುಮಾರು 3ರಿಂದ 4 ಕಿ.ಮೀ ಅಂತರದಿಂದ ದರ್ಶನಕ್ಕಾಗಿ ಭಕ್ತರು ಸಾಲಿನಲ್ಲಿ ನಿಂತಿದ್ದರು.

ಕೋವಿಡ್‌ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ವಿಠ್ಠಲನ ದರ್ಶನ ಈ ಬಾರಿ ಮುಕ್ತವಾಗಿದ್ದರಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಭಾಗ್ಯ ಪಡೆದರು.

ದಾರಿಯುದ್ದಕ್ಕೂ ವಾರಕರಿಗಳಿಗಾಗಿ ಹಲವಾರು ದಾನಿಗಳು ಪ್ರಸಾದದ ವ್ಯವಸ್ಥೆ ಮಾಡಿದ್ದರು. ಅದರಲ್ಲೂ ಕಳೆದ 40 ವರ್ಷಗಳಿಂದ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಬಂಡಿಗಣಿ ಮಠದದಾನೇಶ್ವರ ಮಹಾರಾಜರು ನಿತ್ಯ ಸುಮಾರು 2 ಲಕ್ಷ ಭಕ್ತರಿಗೆ ಉತ್ತರ ಕರ್ನಾಟಕದ ಊಟದ ವ್ಯವಸ್ಥೆ ಈ ಬಾರಿಯೂ ಮಾಡಿದ್ದು ವಿಶೇಷವಾಗಿತ್ತು.

ಚಿನ್ನದ ಮುಕುಟು ಅರ್ಪಣೆ:

ನಾಂದೇಡ್‌ ಜಿಲ್ಲೆಯ ಉಮರಜ ಗ್ರಾಮದ ಸಮಾಜಸೇವಕ ವಿಜಯಕುಮಾರ ಪಂಢರಿನಾಥ ಉತ್ತರರಾವ್‌ ಹಾಗು ಜಯಶ್ರೀ ಉತ್ತರರಾವ್‌ ದಂಪತಿ ಸುಮಾರು ₹1.3 ಕೋಟಿ ಮೊತ್ತದ 1.968 ಕಿ. ಗ್ರಾಂ ಚಿನ್ನದ ಮುಕುಟವನ್ನು ಶ್ರೀ ವಿಠಲ್ಠ- ರುಕ್ಷ್ಮೀಣಿ ದೇವರಿಗೆ ಅರ್ಪಿಸಿದರು.

ಶಾಂತಿ, ಸಮೃದ್ಧಿಗೆ ಸಿಎಂ ಪ್ರಾರ್ಥನೆ

ಸೋಲಾಪುರ:ಏಕಾದಶಿ ನಿಮಿತ್ಯ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಪತ್ನಿ ಲತಾ ಶಿಂಧೆ ದಂಪತಿ ಭಾನುವಾರ ನಸುಕಿನ3.10ಕ್ಕೆ ಬೀಡ್‌ ತಾಲ್ಲೂಕಿನ ಗೋವರಾಯಿ ಗ್ರಾಮದ ಮುರಳಿ ಭಗವಾನ ನವಲೆ ಹಾಗೂ ಜೀಜಾಬಾಯಿ ನವಲೆ ದಂಪತಿಯ ಜೊತೆಗೂಡಿ ಸರ್ಕಾರಿ ಮಹಾ ಪೂಜೆ ನೆರವೇರಿಸಿದರು.

ವಿಠ್ಠಲ ರುಕ್ಮಿಣಿ ದೇವಸ್ಥಾನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಏಕನಾಥ ಶಿಂಧೆ, ಸಮಾಜದ ಶಾಂತಿ, ಸಮೃದ್ಧಿ, ಸಂತೋಷ ನೆಲಸಲಿ ಎಂದು ವಿಠೋಬಾನಲ್ಲಿ ಪ್ರಾರ್ಥಿಸಿದೆ ಎಂದು ಹೇಳಿದರು.

ಆಷಾಢ ಏಕಾದಶಿಯ ವಾರಿಗೆ ನೂರಾರು ವರ್ಷಗಳ ಸಂಪ್ರದಾಯವಿದೆ. ದಿಂಡಿಗಳುಹಲವಾರು ವರ್ಷಗಳಿಂದ ಶಿಸ್ತುಬದ್ಧವಾಗಿ ನಡೆಯುತ್ತಿವೆ. ಇದು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಇಂತಹ ವಾರಿಯಲ್ಲಿ ಭಾಗವಹಿಸುವ ಎಲ್ಲರಿಗೂ ಯಾವುದೇ ಕೊರತೆಯಾಗದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದರು.

ಮುಖ್ಯಮಂತ್ರಿ ಏಕನಾಥ ಶಿಂಧೆ ಕುಟುಂಬಸ್ಥರು, ವಿಠ್ಠಲ ಮಂದಿರ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.