ADVERTISEMENT

ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಅಶೋಕ್‌ ಹಾರನಹಳ್ಳಿ ಆಯ್ಕೆ

455 ಮತಗಳ ಅಂತರದಿಂದ ಗೆಲುವು: 2024ರ ಡಿಸೆಂಬರ್‌ವರೆಗೆ ಅಧಿಕಾರ ಅವಧಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 19:45 IST
Last Updated 19 ಡಿಸೆಂಬರ್ 2021, 19:45 IST
ಅಖಿಲ ಕರ್ನಾಟಕ ಮಹಾಸಭಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್‌ ಹಾರನಹಳ್ಳಿ (ಎಡದಿಂದ ಮೂರನೇಯವರು) ಬೆಂಬಲಿಗರೊಂದಿಗೆ ವಿಜಯದ ಸಂಕೇತ ತೋರಿಸಿದರು  – ಪ್ರಜಾವಾಣಿ ಚಿತ್ರ
ಅಖಿಲ ಕರ್ನಾಟಕ ಮಹಾಸಭಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್‌ ಹಾರನಹಳ್ಳಿ (ಎಡದಿಂದ ಮೂರನೇಯವರು) ಬೆಂಬಲಿಗರೊಂದಿಗೆ ವಿಜಯದ ಸಂಕೇತ ತೋರಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾಗಿ ಅಶೋಕ್‌ ಹಾರನಹಳ್ಳಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಶೋಕ್‌ ಹಾರನಹಳ್ಳಿ, ಎಸ್‌. ರಘುನಾಥ್ ಮತ್ತು ಆರ್‌. ಲಕ್ಷ್ಮೀಕಾಂತ್ ಸ್ಪರ್ಧಿಸಿದ್ದರು. ಅಶೋಕ್‌ ಹಾರನಹಳ್ಳಿ ಮತ್ತು ರಘುನಾಥ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಹಾರನಹಳ್ಳಿ ಅವರು 455 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.

ಅಶೋಕ್‌ ಹಾರನಹಳ್ಳಿ 4,424 ಮತಗಳನ್ನು ಪಡೆದರು. ಪ್ರತಿಸ್ಪರ್ಧಿಗಳಾದ ಎಸ್‌. ರಘುನಾಥ್ 3,969 ಮತಗಳು ಮತ್ತು ಆರ್‌.ಲಕ್ಷ್ಮೀಕಾಂತ್ 2,239 ಮತಗಳನ್ನು ಪಡೆದರು.

ADVERTISEMENT

ಮೊದಲ ಸುತ್ತಿನಿಂದಲೇ ಅಶೋಕ್‌ ಹಾರನಹಳ್ಳಿ ಅವರು ಮುನ್ನಡೆ ಪಡೆದರು. ಮೂರನೇ ಸುತ್ತಿನಲ್ಲಿ ರಘುನಾಥ್‌ ಅವರು ಮುನ್ನಡೆ ಪಡೆದರು. ಹಾವು ಏಣಿ ಆಟದಲ್ಲಿ ಅಶೋಕ್‌ ಹಾರನಹಳ್ಳಿ ಮುನ್ನಡೆ ಸಾಧಿಸಿ ಗೆಲುವಿನ ನಗೆ ಬೀರಿದರು.

ನೂತನ ಅಧ್ಯಕ್ಷರ ಅಧಿಕಾರ ಅವಧಿ 2022ರ ಜನವರಿಯಿಂದ 2024ರ ಡಿಸೆಂಬರ್‌ವರೆಗೆ ಇರಲಿದೆ.

ಭಾನುವಾರ ಕೊನೆಯ ಹಂತದ ಮತದಾನ ನಗರದಲ್ಲಿ ನಡೆಯಿತು. ನಗರದ ಪಂಪ ಮಹಾಕವಿ ರಸ್ತೆಯ ಶಂಕರಪುರದಲ್ಲಿನ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪದಲ್ಲಿ ಮತದಾನಕ್ಕೆ 20 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು.

ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಮತದಾನಕ್ಕೆ ಸಮಯ ನಿಗದಿಪಡಿಸಲಾಗಿತ್ತು. ಆದರೆ, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರಿಂದ ಮತ್ತೆ ಒಂದು ಗಂಟೆ ಕಾಲ ಹೆಚ್ಚು ಸಮಯಾವಕಾಶ ನೀಡಲಾಯಿತು.

ಮೈಸೂರು, ಹಾಸನ, ಶಿವಮೊಗ್ಗ, ಹುಬ್ಬಳ್ಳಿ, ರಾಯಚೂರು ಕೇಂದ್ರಗಳಲ್ಲಿ ಡಿ.12ರಂದು ಮತದಾನ ನಡೆದಿತ್ತು. ಈ ಎಲ್ಲ ಕೇಂದ್ರಗಳಲ್ಲಿನ ಮತಗಳನ್ನು ಕ್ರೋಡಿಕರಿಸಿದ ಬಳಿಕ ಮತ ಎಣಿಕೆ ನಡೆಯಿತು. ಬೆಂಗಳೂರು ಸೇರಿದಂತೆ ಎಲ್ಲ ಆರು ಕೇಂದ್ರಗಳಲ್ಲಿ 10,711 ಮತದಾರರು ತಮ್ಮ ಮತ ಚಲಾಯಿಸಿದ್ದರು.

ರಾಜ್ಯದಲ್ಲಿ ಒಟ್ಟು 41 ಸಾವಿರ ಮಂದಿ ಮತದಾರರಿದ್ದಾರೆ. ಇದರಲ್ಲಿ 27 ಸಾವಿರ ಮತದಾರರು ಬೆಂಗಳೂರಿನಲ್ಲೇ ಇದ್ದಾರೆ. ಆದರೆ, ಇವರಲ್ಲಿ 7,054 ಮಂದಿ ಮಾತ್ರ ಮತ ಚಲಾಯಿಸಿದರು.

ಮತದಾನದ ವಿವರ
ಶಿವಮೊಗ್ಗ; 1083
ಹಾಸನ; 619
ಹುಬ್ಬಳ್ಳಿ; 355
ಮೈಸೂರು; 1221
ರಾಯಚೂರು; 379
ಬೆಂಗಳೂರು; 7054

**
ಒಟ್ಟು ಮತಗಳು: 10711
**

ಅಭ್ಯರ್ಥಿಗಳು ಪಡೆದ ಮತಗಳ ವಿವರ

ಅಶೋಕ್‌ ಹಾರನಹಳ್ಳಿ; 4,424

ಎಸ್‌. ರಘುನಾಥ್‌; 3,969

ಆರ್‌. ಲಕ್ಷ್ಮಿಕಾಂತ್‌; 2,239

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.