ADVERTISEMENT

ವಿಧಾನ ಮಂಡಲ ಅಧಿವೇಶನ | ‘ಮಾತು ಬಿಟ್ಟ’ ಅಶೋಕ: ಸಿ.ಎಂ ಸಂಯಮದ ಪಾಠ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 18:20 IST
Last Updated 9 ಡಿಸೆಂಬರ್ 2025, 18:20 IST
<div class="paragraphs"><p>ಅಶೋಕ ಹಾಗೂ ಸಿದ್ದರಾಮಯ್ಯ</p></div>

ಅಶೋಕ ಹಾಗೂ ಸಿದ್ದರಾಮಯ್ಯ

   

– ಪ್ರಜಾವಾಣಿ ಚಿತ್ರಗಳು

ಬೆಳಗಾವಿ(ಸುವರ್ಣ ವಿಧಾನಸೌಧ): ತಮ್ಮ ಮಾತಿಗೆ ಸಚಿವರಾದ ಕೃಷ್ಣ ಬೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಮುನಿಸಿಕೊಂಡ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಮಾತು ಮುಂದುವರಿಸಲು ನಿರಾಕರಿಸಿದರೆ, ಸುಗಮ ಕಲಾಪಕ್ಕೆ ಆಡಳಿತ ಮತ್ತು ವಿರೋಧ ಪಕ್ಷದವರ ಸಂಯಮ ಎಷ್ಟು ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಠ ಮಾಡಿದರು.

ADVERTISEMENT

ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಮಂಗಳವಾರ ಅಶೋಕ ಮಾತನಾಡುವಾಗ, ‘ಬರ ಪರಿಹಾರ ಸಮರ್ಪಕವಾಗಿ ನೀಡಿಲ್ಲ’ ಎಂದು ಹೇಳಿದ್ದು, ಕೃಷ್ಣ ಬೈರೇಗೌಡ ಅವರನ್ನು ಕೆರಳಿಸಿತು. ತಮ್ಮ ಅವಧಿಯಲ್ಲಿ ಎಷ್ಟು ಮೊತ್ತದ ಪರಿಹಾರ ನೀಡಲಾಗಿದೆ ಎಂಬ ಅಂಕಿ–ಅಂಶ ಮುಂದಿಟ್ಟರು. ಈ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್‌ನ ಇತರ ಸದಸ್ಯರು ಅಶೋಕ ಅವರನ್ನು ತರಾಟೆಗೆ ತೆಗೆದುಕೊಂಡಾಗ, ತಮ್ಮ ಮಾತನ್ನು ನಿಲ್ಲಿಸಿದ ಅಶೋಕ ಸುಮ್ಮನೆ ಕುಳಿತರು.

ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಅಶೋಕ ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರೂ ಮಣಿಯಲಿಲ್ಲ. ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಲು ಮುಂದಾದಾಗ, ಸಭಾಧ್ಯಕ್ಷರು ಕಲಾಪ ಮುಂದೂಡಿದರು. ಬಳಿಕ ಸಭಾಧ್ಯಕ್ಷರು ವಿರೋಧ ಪಕ್ಷಗಳ ಸದಸ್ಯರನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಸಂಧಾನ ನಡೆಸಿದರು.

ಮತ್ತೆ ಕಲಾಪ ಆರಂಭವಾದಾಗ ಕಲಾಪದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಸಿದ್ದರಾಮಯ್ಯ ಅವರು ಆಡಳಿತ ಮತ್ತು ವಿರೋಧಪಕ್ಷದವರಿಗೆ ತಿಳಿ ಹೇಳಿದರು.

ಕಲಾಪ ಸುಸೂತ್ರಕ್ಕೆ ಸಿದ್ದರಾಮಯ್ಯ ಸೂತ್ರ

  • ಸಭಾನಾಯಕ ಮತ್ತು ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಅವರಿಗೆ ಸಚಿವರು ಸೇರಿ ಯಾರೂ ಅಡ್ಡಿಪಡಿಸಬಾರದು

  • ಇತ್ತೀಚಿನ ದಿನಗಳಲ್ಲಿ ಸದನದ ಗೌರವ ಕಡಿಮೆ ಆಗುತ್ತಿದೆ, ಚರ್ಚೆಯ ಗುಣಮಟ್ಟ ಕಡಿಮೆ ಆಗುತ್ತಿದೆ ಎಂಬ ಭಾವನೆ ಜನರಲ್ಲಿದೆ. ಇದನ್ನು ಸರಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ

  • ಮುಖ್ಯಮಂತ್ರಿಯಾಗಲಿ, ವಿರೋಧ ಪಕ್ಷದ ನಾಯಕರಾಗಲಿ, ಸದಸ್ಯರಾಗಲಿ ಅಸಂಸದೀಯ ಪದ ಬಳಸಬಾರದು. ಸಂಸದೀಯ ಪದಗಳ ಮೂಲಕವೇ ಟೀಕೆ–ಟಿಪ್ಪಣಿ ಮಾಡಬಹುದು. ವಿರೋಧ ಪಕ್ಷದವರು ಟೀಕೆ ಮಾಡಿದಾಗ ಅಡ್ಡಿಪಡಿಸುವ ಕ್ರಮ ಸರಿಯಲ್ಲ. ಇದು ಸಚಿವರಿಗೂ ಅನ್ವಯವಾಗುತ್ತದೆ. ವಿರೋಧ ಪಕ್ಷದ ನಾಯಕರು ಒಪ್ಪಿದರೆ ಮಾತ್ರ ಮಧ್ಯಪ್ರವೇಶಿಸಿ ಮಾತನಾಡಬೇಕು. ಒಪ್ಪದಿದ್ದರೆ ಮಾತನಾಡಬಾರದು

  • ಟೀಕೆ ಮಾಡಿ, ಆದರೆ ಅಸತ್ಯ ಹೇಳಬೇಡಿ. ವಾಸ್ತವ ವಿಚಾರವನ್ನು ಮುಂದಿಟ್ಟುಕೊಂಡು ಟೀಕೆ ಮಾಡಿದರೆ ನಮ್ಮ ಆಕ್ಷೇಪವಿಲ್ಲ. ಅದೇ ರೀತಿ ನಾವು ಉತ್ತರ ಕೊಡುವಾಗ ದಾರಿ ತಪ್ಪಿಸಬೇಡಿ. ಇಷ್ಟು ಆದರೆ ಚರ್ಚೆ ಗುಣಮಟ್ಟ ಹೆಚ್ಚುತ್ತದೆ

ಉತ್ತರ ಕರ್ನಾಟಕ ಕುರಿತ ಚರ್ಚೆಯನ್ನು ಬುಧವಾರ ಮುಂದುವರಿಸುವುದಾಗಿ ಅಶೋಕ ಹೇಳಿದರು

ನೀವು ಸುಳ್ಳು ಹೇಳಿದರೆ ಕೇಳಿಕೊಂಡು ನಾವು ಸುಮ್ಮನೇ ಕುಳಿತುಕೊಳ್ಳಬೇಕೆ? ಸರಿಯಾದ ಮಾಹಿತಿ ಕೊಡಿ ಜನಕ್ಕೆ ತಪ್ಪು ಸಂದೇಶ ಹೋಗಬಾರದು
ಕೃಷ್ಣ ಬೈರೇಗೌಡ, ಕಂದಾಯ ಸಚಿವ

‘ಹೇಗೆ ಮಾತಾಡಬೇಕೆಂದು ಬರೆದುಕೊಡಿ’

‘ನಾವು ಏನು ಮಾಡಬೇಕು, ಏನು ಮಾತನಾಡಬೇಕು ಎಂಬುದನ್ನು ಬರೆದುಕೊಡಿ. ನಿಮ್ಮ ಬಳಿ ಅಧಿಕಾರಿಗಳಿದ್ದಾರೆ. ನನ್ನ ಬಳಿ ಯಾರಿದ್ದಾರೆ? ನನಗೆ ಸ್ವಲ್ಪ ಜ್ಞಾನ ಕಡಿಮೆ ಇರಬಹುದು. ತಿಳಿವಳಿಕೆ ಕಡಿಮೆ ಇರಬಹುದು. ಆದ್ದರಿಂದ ನೀವೇ ಬರೆದುಕೊಡಿ’ ಎಂದು
ಆರ್‌.ಅಶೋಕ ಅವರು ಕಿಡಿಕಾರಿದರು.

‘ನಾನು ಏನಾದರೂ ತಪ್ಪು ಹೇಳಿದರೆ ತಿದ್ದಲು ಮುಖ್ಯಮಂತ್ರಿ ಇದ್ದಾರೆ. ಅವರಿಗೆ ಗೊತ್ತಿಲ್ಲಾ ಎಂದರೆ  ನಿಮ್ಮ(ಕೃಷ್ಣ ಬೈರೇಗೌಡ) ಜ್ಞಾನವನ್ನು ಅವರಿಗೆ ಧಾರೆ ಎರೆದು ಕೊಡಿ’ ಎಂದು ಕುಟುಕಿದರು.

ಆವರ್ತನಿಧಿ ಏಕೆ ಸ್ಥಾಪಿಸಿಲ್ಲ?

‘ರೈತರ ಸಂಕಷ್ಟಕ್ಕೆ ಸ್ಪಂದಿಸಲು ₹5,000 ಕೋಟಿ ಆವರ್ತನಿಧಿ ಸ್ಥಾಪಿಸುವುದಾಗಿ ಕಾಂಗ್ರೆಸ್‌ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ಈವರೆಗೂ ಆವರ್ತನಿಧಿ ಏಕೆ ಸ್ಥಾಪಿಸಿಲ್ಲ’ ಎಂದು ಚರ್ಚೆ ಆರಂಭಿಸಿದ ಆರ್‌.ಅಶೋಕ ಅವರು ಪ್ರಶ್ನಿಸಿದರು.

‘ರಾಜ್ಯದಲ್ಲಿ 422 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 37 ಮಂದಿ ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಉತ್ತರ ಕರ್ನಾಟಕದ ರೈತರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಸಿದ್ದರಾಮಯ್ಯ ಅವರು ನಿಜವಾಗಿ ರೈತರೇ ಆಗಿದ್ದರೆ, ನೇಗಿಲು ಹಿಡಿದು ಉಳುಮೆ ಮಾಡಿದ್ದರೆ ರೈತರಿಗೆ ಸ್ಪಂದಿಸುತ್ತಿದ್ದರು. ಈಗ ರೈತರು ರೊಚ್ಚಿಗೆದ್ದಿದ್ದಾರೆ. ಇದು ಕಲ್ಲು ಹೃದಯದ ಸರ್ಕಾರ’ ಎಂದು ಟೀಕಿಸಿದರು.

14.21 ಲಕ್ಷ ರೈತರಿಗೆ ಪರಿಹಾರ

ಈ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ 14.21 ಲಕ್ಷ ರೈತರಿಗೆ ₹2,249 ಕೋಟಿ ಬೆಳೆ ಪರಿಹಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

‘2023 ರಲ್ಲಿ ಬರ ತಲೆದೋರಿದಾಗ ಸುಪ್ರೀಂ ಕೋರ್ಟ್ ಮೊರೆ ಹೋಗಿ ಪರಿಹಾರ ಕೇಳುವ ಪ್ರಸಂಗ ಬಂದಿತ್ತು. ಆ ಬಳಿಕ ಕೇಂದ್ರದ ಅನುದಾನ ಸಿಕ್ಕಿತು. ಆಗ ನಮ್ಮ ಸರ್ಕಾರ ಇತಿಹಾಸದಲ್ಲೇ ಅತಿ ಹೆಚ್ಚು ಪರಿಹಾರ ನೀಡಿತು. 38 ಲಕ್ಷ ರೈತರಿಗೆ ₹4,300 ಕೋಟಿ ಪರಿಹಾರ ನೀಡಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.