ನವದೆಹಲಿ: ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ 8,280 ಎಕರೆ ಭೂಸ್ವಾಧೀನ ಬಾಕಿ ಇದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಗೆ ಬುಧವಾರ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ರಾಯಚೂರು ಸಂಸದ ಜಿ.ಕುಮಾರ ನಾಯಕ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ನಾಲ್ಕು ಪ್ರಮುಖ ಯೋಜನೆಗಳಿಗೆ ಒಂದೇ ಒಂದು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲ’ ಎಂದರು.
‘ರಾಜ್ಯದಲ್ಲಿ 25 ರೈಲ್ವೆ (ಹೊಸ ಹಾಗೂ ಜೋಡಿ ಹಳಿ) ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಈ ಯೋಜನೆಗಳ ಒಟ್ಟು ಉದ್ದ 3,264 ಕಿ.ಮೀ. ಈ ತನಕ ಪೂರ್ಣಗೊಂಡಿರುವ 1,394 ಕಿ.ಮೀ. ಪೂರ್ಣಗೊಂಡಿದೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಯೋಜನೆಗಳ ಅನುಷ್ಠಾನ ತಡವಾಗಿದೆ. ಶೇ 37ರಷ್ಟು ಜಮೀನು ಸ್ವಾಧೀನಪಡಿಸಿಕೊಳ್ಳಬೇಕಿದೆ’ ಎಂದು ಅವರು ಮಾಹಿತಿ ನೀಡಿದರು.
ಹೆಜ್ಜಾಲ–ಚಾಮರಾಜನಗರ ನಡುವೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಶೇ 50ರಷ್ಟು ಅನುದಾನ ನೀಡಬೇಕಿತ್ತು. ಆದಾಗ್ಯೂ, ಕರ್ನಾಟಕ ಸರ್ಕಾರ ಇದೀಗ ನಿಲುವು ಬದಲಿಸಿದ್ದರಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಆಗುತ್ತಿಲ್ಲ ಎಂದು ವೈಷ್ಣವ್ ತಿಳಿಸಿದರು.
ನೈರುತ್ಯ ವಲಯದಲ್ಲಿ ರೈಲ್ವೆ ಜಾಲ ಕಡಿಮೆ: ‘ದೇಶದಲ್ಲಿ 17 ರೈಲ್ವೆ ವಲಯಗಳಿವೆ. ಒಟ್ಟು ರೈಲ್ವೆ ಜಾಲ 69,181 ಕಿ.ಮೀ. ಬೇರೆ ವಲಯಗಳಿಗೆ ಹೋಲಿಸಿದರೆ ನೈರುತ್ಯ ವಲಯದಲ್ಲಿ ರೈಲ್ವೆ ಜಾಲ ಕಡಿಮೆ. ಇಲ್ಲಿ 3,692 ಕಿ.ಮೀ. ರೈಲ್ವೆ ಜಾಲ ಇದೆ’ ಎಂದು ಅವರು ಮಾಹಿತಿ ನೀಡಿದರು.
‘ಯಾವುದೇ ಪ್ರದೇಶದಲ್ಲಿನ ರೈಲ್ವೆ ಜಾಲವು ಆ ಪ್ರದೇಶದ ಜನಸಂಖ್ಯಾ ಸಾಂದ್ರತೆ, ಭೂಪ್ರದೇಶ, ಭೌಗೋಳಿಕ ಲಕ್ಷಣಗಳು ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ, ರೈಲ್ವೆ ಸಾಂದ್ರತೆಯು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.