
ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)
ಬೆಂಗಳೂರು: ‘ಲೇ ಆರೆಸ್ಸೆಸ್‌ನವ್ರಾ ...ಥೂ ನಿಮ್ಮ... ಅಯೋಗ್ಯರಾ. . ಯಾಕೆ ಕೂಗಾಡ್ತೀರಿ... ನಿಮಗೆ ಬೆಂಕಿ ಹಾಕಾ. ಅಸೆಂಬ್ಲಿಗೆ ಬಂದು ಡ್ಯಾನ್ಸ್ ಮಾಡ್ತೀರಾ? ನಿಮಗೆ ನಾಚಿಕೆ ಮಾನ– ಮರ್ಯಾದೆ ಇಲ್ವಾ? ನಿಮ್ಮಂತ ನೂರು ನಾಯಿಗಳು ಬಂದರೂ ನಾನು ಹೆದರಲ್ಲ. . .’
ಹೀಗೆಂದು ವಿಧಾನಸಭೆಯಲ್ಲಿ ಬಿಜೆಪಿಯ ಸದಸ್ಯರ ವಿರುದ್ಧ ಕೂಗಾಡಿದ್ದು ಕಾಂಗ್ರೆಸ್‌ನ ಕೆ.ಎಂ.ಶಿವಲಿಂಗೇಗೌಡ.
‘ವಿಬಿ ಜಿ ರಾಮ್ ಜಿ’ ಕಾಯ್ದೆಯನ್ನು ವಿರೋಧಿಸಿ ಮಂಡಿಸಿದ್ದ ನಿರ್ಣಯದ ಪರ ಮಾತನಾಡಲು ನಿಂತ ತಮಗೆ ಅಡ್ಡಿಪಡಿಸಿದರು ಎಂದು ರೊಚ್ಚಿಗೆದ್ದ ಗೌಡರು ಬಿಜೆಪಿ–ಜೆಡಿಎಸ್ ಸದಸ್ಯರನ್ನು ನಾಯಿ, ಕೋತಿ ಎಂದೆಲ್ಲ ಬೈದಾಡಿದರು.
ಶಿವಲಿಂಗೇಗೌಡ ಅವರ ನಿಂದನೆ ಮಾತುಗಳು ಹೆಚ್ಚಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಅವರ ವಿರುದ್ಧ ಘೋಷಣೆಗಳನ್ನು ಕೂಗುವುದನ್ನೂ ತಾರಕಕ್ಕೇರಿಸಿದರು. ‘ಕೊಬ್ಬರಿ ಕಳ್ಳ, ಕೊಬ್ಬರಿ ಭ್ರಷ್ಟ... ದೇವೇಗೌಡರಿಗೆ ಮೋಸ ಮಾಡಿದವರು ’ ಎಂದು ಘೋಷಣೆಗಳನ್ನು ಕೂಗಿದರು.
‘ಇವರು ವಿರೋಧ ಪಕ್ಷದವರಾ... ಏಯ್ ವಿರೋಧ ಪಕ್ಷದ ನಾಯಕರೇ, ಇವರೆಲ್ಲ ಕೋತಿಗಳು. ಕೋತಿಗಳನ್ನು ಇಲ್ಲಿ ತಂದು ಕುಣಿಸ್ತಾ ಇದ್ದೀರಾ. ನೀವು ಆರೆಸ್ಸೆಸ್‌ನವರು ದೇಶವನ್ನು ಹಾಳು ಮಾಡಿದ್ದೀರಿ. ಇಲ್ಲಿ ನಾವು ಭಾಷಣ ಮಾಡುವಾಗ ಅಡ್ಡಿಪಡಿಸುತ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ನಿರತ ಬಿಜೆಪಿಯ ಶರಣು ಸಲಗರ ಮತ್ತು ವೇದವ್ಯಾಸ್ ಕಾಮತ್ ಅವರು, ‘ಕೊಬ್ಬರಿಯಲ್ಲಿ ಭ್ರಷ್ಟಾಚಾರ ಮಾಡಿದ ಶಿವಲಿಂಗೇಗೌಡರಿಗೆ ಧಿಕ್ಕಾರ. ಅಧಿಕಾರದ ವ್ಯಾಮೋಹಕ್ಕೆ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮೋಸ ಮಾಡಿ, ಅವರ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಸೇರಿದ ಶಿವಲಿಂಗೇಗೌಡ ಅವರಿಗೆ ಧಿಕ್ಕಾರ’ ಎಂದು ಹೇಳಿದ್ದು ಗೌಡರನ್ನು ಮತ್ತಷ್ಟು ಕೆರಳಿಸಿತು.
‘ನಿನ್ನ ಹೆಂಡ್ತಿ ತಹಶೀಲ್ದಾರ್. ನೀನು ಹೆಂಡ್ತೀನ ಬಿಟ್ಟು ಹಣ ಹೊಡಿತಾ ಇದ್ದೀಯಾ. ನೀನು ಅತಿ ಭ್ರಷ್ಟ’ ಎಂದು ಶರಣು ಸಲಗರ ವಿರುದ್ಧ ಕಿಡಿಕಾರಿದ ಶಿವಲಿಂಗೇಗೌಡ , ‘ಇವರನ್ನು ಕೂಡಲೇ ಸದನದಿಂದ ಹೊರ ಹಾಕಬೇಕು. 80 ವರ್ಷದ ವಿಧಾನಸಭೆಯ ಇತಿಹಾಸದಲ್ಲಿ ಇಂತಹ ಅಯೋಗ್ಯ ಕೆಲಸ ಮಾಡಿದವರು ಯಾರೂ ಇಲ್ಲ’ ಎಂದರು.
ಈ ಹಂತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಬಕಾರಿ ಸಚಿವ ತಿಮ್ಮಾಪುರ ಜತೆ ಶಿವಲಿಂಗೇಗೌಡರಿಗೆ ಧಿಕ್ಕಾರ ಹಾಕುವುದನ್ನು ಮುಂದುವರಿಸಿದರು.
ಆಗ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ‘ಶಿವಲಿಂಗೇಗೌಡರು ಕೆಲವು ಅಸಂಸದೀಯ ಪದಗಳನ್ನು ಬಳಸಿದ್ದಾರೆ. ಅವುಗಳನ್ನು ಕಡತದಿಂದ ತೆಗೆದುಹಾಕಬೇಕು. ಶರಣು ಸಲಗರ ಅವರ ಪತ್ನಿಯ ವಿರುದ್ಧವೂ ಆರೋಪ ಮಾಡಿದ್ದಾರೆ. ಅವರು ಇಲ್ಲಿ ಬಂದು ತಮ್ಮನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಅಪ್ಪ... ಇತ್ಯಾದಿ ಪದಗಳನ್ನು ಬಳಸಿದರೆ. ಈ ಸಂಬಂಧ ಶಿವಲಿಂಗೇಗೌಡರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ಕಾಂಗ್ರೆಸ್ ಸದಸ್ಯರು ಶಿವಲಿಂಗೇಗೌಡ ನೆರವಿಗೆ ಧಾವಿಸಿದರು. ಬಿಜೆಪಿ ಮತ್ತು ಜೆಡಿಎಸ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿಯವರ ಬಾಯಿ ಮುಚ್ಚಿಸಿ, ಇಲ್ಲವೇ ಸದನದಿಂದ ಹೊರಹಾಕಿ ಎಂದು ಸಭಾಧ್ಯಕ್ಷರನ್ನು ಆಗ್ರಹಿಸಿದರು. ಗದ್ದಲ ಹೆಚ್ಚಾದಾಗ ಸಭಾಧ್ಯಕ್ಷರು ಕಲಾಪ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.