ADVERTISEMENT

ಯಾರು ಏನೇ ಹೇಳಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕು: ಕಾಗೆ

‘ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ’ * ಪ್ರತಿಯೊಂದಕ್ಕೂ ನಾವು ಬೆಂಗಳೂರಿಗೆ ಹೋಗುವುದಕ್ಕೆ ಆಗುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 16:03 IST
Last Updated 11 ಡಿಸೆಂಬರ್ 2025, 16:03 IST
ಭರಮಗೌಡ (ರಾಜು) ಕಾಗೆ
ಭರಮಗೌಡ (ರಾಜು) ಕಾಗೆ   

ಸುವರ್ಣ ವಿಧಾನಸೌಧ (ಬೆಳಗಾವಿ): ‘ಯಾವುದೇ ಸಂಘ– ಸಂಸ್ಥೆಗಳು, ಸಂಘಟನೆಗಳು ಮತ್ತು ಯಾರು ಏನೇ ಹೇಳಲಿ, ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗೆ ಹೋರಾಟ ಮಾಡುತ್ತೇನೆ’ ಎಂದು ಕಾಂಗ್ರೆಸ್‌ನ ರಾಜು ಕಾಗೆ ಹೇಳಿದರು.

ವಿಧಾನಸಭೆಯಲ್ಲಿ ಗುರುವಾರ ಉತ್ತರ ಕರ್ನಾಟಕ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಪ್ರತ್ಯೇಕ ರಾಜ್ಯ ಮಾಡಬೇಕು ಎಂಬುದರ ಕುರಿತಾಗಿ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ. ಈಗಲೂ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದರು.

‘ನೀರಾವರಿ, ಶಿಕ್ಷಣ, ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಭಾಗವನ್ನು ನಿರ್ಲಕ್ಷಿಸಲಾಗಿದೆ. ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಲ್ಯಾಣ ಕರ್ನಾಟಕದಂತೆ ಕಿತ್ತೂರು ಕರ್ನಾಟಕ ಭಾಗಕ್ಕೂ ₹5,000 ಕೋಟಿ ನೀಡುವುದಾಗಿ ಪ್ರಕಟಿಸಲಾಗಿತ್ತು. ಈವರೆಗೂ ಹಣ ಬಂದಿಲ್ಲ. ಪ್ರತಿಯೊಂದಕ್ಕೂ ನಾವು ಬೆಂಗಳೂರಿಗೆ ಹೋಗುವುದಕ್ಕೆ ಆಗುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಪ್ರಜಾಸೌಧ ನಿರ್ಮಾಣಕ್ಕೆ ಕಡೂರಿಗೆ ₹16 ಕೋಟಿ ಕೊಡುತ್ತಾರೆ. ನನ್ನ ಕ್ಷೇತ್ರಕ್ಕೂ ಅಷ್ಟೇ ಮೊತ್ತ ಕೊಡಿ. ನಮ್ಮ ಕ್ಷೇತ್ರದಲ್ಲಿ ನದಿಗೆ ಸೇತುವೆ ನಿರ್ಮಿಸಲು ನಾಲ್ಕು ಪಿಲ್ಲರ್‌ ಹಾಕಲಾಗಿದೆ. ಆದರೆ ಸೇತುವೆ ನಿರ್ಮಾಣ ಆಗಿಲ್ಲ. ಯಾವುದೇ ಕೆಲಸ ಆಗಬೇಕು ಎಂದರೆ ಮುಖ್ಯಮಂತ್ರಿ ಬಳಿ ಹೋಗಿ ಎಂದು ಹೇಳುತ್ತಾರೆ. ನಾನು ಏನೇ ಮಾತನಾಡಿದರೂ ಸರ್ಕಾರದ ವಿರುದ್ಧ ಮಾತನಾಡುತ್ತಾರೆ ಎಂದು ಬಿಂಬಿಸಲಾಗುತ್ತದೆ ನಮ್ಮ ಗೋಳು ಕೇಳುವವರು ಯಾರು’ ಎಂದು ಕಾಗೆ ಪ್ರಶ್ನಿಸಿದರು.

‘ನಮ್ಮ ಭಾಗದ ಜಿಲ್ಲೆಗಳಲ್ಲಿ ಅತಿಯಾದ ನೀರಾವರಿಯಿಂದಾಗಿ ಶೇ 60 ರಿಂದ ಶೇ 70 ರಷ್ಟು ಕೃಷಿ ಭೂಮಿ ಕ್ಷಾರಯುಕ್ತವಾಗಿದೆ. ಇದನ್ನು ಸರಿಪಡಿಸಲು ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಕನಿಷ್ಠ ₹10 ಕೋಟಿ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.