ADVERTISEMENT

ಅತ್ತಿಬೆಲೆ ಸಿಪಿಐ, ಪಿಎಸ್‌ಐ ಅಮಾನತು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 2:22 IST
Last Updated 5 ಏಪ್ರಿಲ್ 2020, 2:22 IST
ಕರ್ನಾಟಕ ರಾಜ್ಯ ಪೊಲೀಸ್
ಕರ್ನಾಟಕ ರಾಜ್ಯ ಪೊಲೀಸ್   

ಬೆಂಗಳೂರು: ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಸಾರಿಗೆ ಇನ್‌ಸ್ಪೆಕ್ಟರ್‌ಗಳು ಸಿಕ್ಕಿಬಿದ್ದ ಬೆನ್ನಲ್ಲೇ ಅತ್ತಿಬೆಲೆ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಸತೀಶ್ ಹಾಗೂ ಪಿಎಸ್‌ಐ ನವೀನ್ ಅವರನ್ನು ಅಮಾನತು ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಅಗತ್ಯ ವಸ್ತುಗಳನ್ನು ಸಾಗಣೆ ಮಾಡುವ ವಾಹನಗಳನ್ನು ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ಸಾರಿಗೆ ಇನ್‌ಸ್ಪೆಕ್ಟರ್‌ಗಳಾದ ಟಿ. ಕೆ ಜಯಣ್ಣ ಹಾಗೂ ಕರಿಯಪ್ಪ, ಲಂಚ ಪಡೆದು ತಾತ್ಕಾಲಿಕ ಪರ್ಮಿಟ್ ಕೊಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಲಾರಿ ಚಾಲಕನ ವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ, ಜಯಣ್ಣ ಹಾಗೂ ಕರಿಯಪ್ಪ ಅವರನ್ನು ಪುರಾವೆ ಸಮೇತ ಬಂಧಿಸಿದ್ದರು. ಸದ್ಯ ಅವರಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ADVERTISEMENT

ಇನ್‌ಸ್ಪೆಕ್ಟರ್‌ಗಳು ಲಂಚ ಪಡೆಯುತ್ತಿದ್ದ ಬಗ್ಗೆ ದೂರುಗಳಿದ್ದರೂ ಸಿಪಿಐ ಸತೀಶ್ ಹಾಗೂ ಪಿಎಸ್‌ಐ ನವೀನ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕರ್ತವ್ಯಲೋಪ ಆರೋಪದಡಿ ಅವರಿಬ್ಬರನ್ನು ಅಮಾನತು ಮಾಡಿ ಎಸ್ಪಿ ಚನ್ನಣ್ಣನವರ ಆದೇಶ ಹೊರಡಿಸಿರುವುದಾಗಿ ಮೂಲಗಳು ಹೇಳಿವೆ.

ಪೊಲೀಸರ ಹೆಸರಿನಲ್ಲೂ ವಸೂಲಿ: ಕೆಲಸದಿಂದ ಕಿತ್ತು ಹಾಕಿದ್ದ ಗೃಹ ರಕ್ಷಕ ವಿವೇಕ್ ಎಂಬಾತ, ಚೆಕ್‌ಪೋಸ್ಟ್‌ನಲ್ಲಿ ನಿಂತು ಪೊಲೀಸರ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ. ಇದು ಗೊತ್ತಿದ್ದರೂ ಸಿಪಿಐ ಹಾಗೂ ಪಿಎಸ್‌ಐ ಮೌನವಾಗಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ವಿವೇಕ್‌ನನ್ನೂ ಈಗಾಗಲೇ ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.