ADVERTISEMENT

ಸಿಪಿಐ ಕಚೇರಿಗೆ ಬೆಂಕಿ ಹಚ್ಚಲು ಯತ್ನ

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕೃತ್ಯ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 21:28 IST
Last Updated 25 ಡಿಸೆಂಬರ್ 2019, 21:28 IST
ಬೆಂಕಿ ಹಚ್ಚಿದ ಪರಿಣಾಮ ಹಾನಿಗೊಳಗಾದ ಬೈಕ್‌ಗಳು   ಪ್ರಜಾವಾಣಿ ಚಿತ್ರ
ಬೆಂಕಿ ಹಚ್ಚಿದ ಪರಿಣಾಮ ಹಾನಿಗೊಳಗಾದ ಬೈಕ್‌ಗಳು   ಪ್ರಜಾವಾಣಿ ಚಿತ್ರ   

ಬೆಂಗಳೂರು: ವೈಯಾಲಿಕಾವಲ್‌ನಲ್ಲಿರುವ ಸಿಪಿಐ (ಭಾರತ ಕಮ್ಯುನಿಸ್ಟ್ ಪಕ್ಷ) ಕಚೇರಿಗೆ ಮಂಗಳವಾರ ಮಧ್ಯರಾತ್ರಿ ಬೆಂಕಿ ಹಚ್ಚಲು ಮುಂದಾಗಿದ್ದ ದುಷ್ಕರ್ಮಿಗಳು, ಅಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಮಂಗಳವಾರ ಕೇರಳದ ಕಣ್ಣೂರಿನಲ್ಲಿ ಸಿಪಿಐ ಕಾರ್ಯಕರ್ತರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಕಾರು ತಡೆದು ಕಪ್ಪು ಬಾವುಟ ಪ್ರದರ್ಶಿಸಿದ್ದರು. ಅದಕ್ಕೆ ಪ್ರತೀಕಾರವೆಂಬಂತೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಆದರೆ, ಅದನ್ನು ಪೊಲೀಸರು ಖಚಿತಪಡಿಸಿಲ್ಲ.

ವೈಯಾಲಿಕಾವಲ್‌ನ ಜೆ.ಡಿ. ಪಾರ್ಕ್‌ ಬಡಾವಣೆಯಲ್ಲಿರುವ ಘಾಟೆ ಭವನಕ್ಕೆ (ಸಿಪಿಐ ಬೆಂಗಳೂರು ಜಿಲ್ಲಾ ಮಂಡಳಿ ಕಚೇರಿ) ಮಂಗಳವಾರ ರಾತ್ರಿ ಒಂದು ಗಂಟೆ ಸುಮಾರಿಗೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ಕಚೇರಿಯ ಕಬ್ಬಿಣದ ಬಾಗಿಲಿಗೆ ಪೆಟ್ರೋಲ್ ಸುರಿದು, ಬಳಿಕ ಕಚೇರಿ ಮುಂಭಾಗ ನಿಂತಿದ್ದ ಆರು ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಎರಡು ವಾಹನಗಳು ಸುಟ್ಟು ಕರಕಲಾಗಿದ್ದು, ನಾಲ್ಕು ವಾಹನಗಳಿಗೆ ಹಾನಿಯಾಗಿವೆ. ಕಬ್ಬಿಣದ ಬಾಗಿಲು ಕೂಡಾ ಸುಟ್ಟಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಕಚೇರಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ಆತನ ಕುಟುಂಬ ಅಲ್ಲೇ ವಾಸವಾಗಿದೆ. ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕುಟುಂಬ, ನೀರು ಸುರಿದು ಬೆಂಕಿ ನಂದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.