ADVERTISEMENT

ಸರ್ಕಾರ ಕೆಡವಲು ಪ್ರಯತ್ನ: ಡಿಕೆಶಿ ಬೇಜವಾಬ್ದಾರಿ ಹೇಳಿಕೆ ನಿಲ್ಲಿಸಲಿ ಎಂದ ಕಾಗೇರಿ

ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 7:50 IST
Last Updated 25 ಜುಲೈ 2023, 7:50 IST
   

ಶಿರಸಿ: ಉಪಮುಖ್ಯಮಂತ್ರಿ ಹುದ್ದೆ ಜವಾಬ್ದಾರಿ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಸಿಂಗಾಪುರದಲ್ಲಿ ಕುಳಿತು ಕಾಂಗ್ರೆಸ್ ಸರ್ಕಾರ ಕೆಡವಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ, ಧೈರ್ಯವಿದ್ದರೆ ಆ ಕೆಲವರು ಯಾರು? ಎಂಬುದನ್ನು ಅವರ ಹೆಸರು ಸಹಿತ ಬಹಿರಂಗ ಮಾಡಬೇಕು. ಅದರ ಬದಲು ಅನಗತ್ಯ ಹೇಳಿಕೆ ನೀಡಿ ಜನತೆಯಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು ಎಂದರು.

ರಾಜ್ಯದಲ್ಲಿ ಪ್ರವಾಹ ಸ್ಥಿತಿಯಿದೆ. ಅನೇಕ ಅವಘಡಗಳು ಸಂಭವಿಸುತ್ತಿವೆ. ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್. ನಿಧಿಯಡಿ ಪರಿಹಾರ ನೀಡಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರದ ವತಿಯಿಂದ ಈವರೆಗೆ ಯಾವುದೇ ಪರಿಹಾರ ವಿತರಣೆ ಕಾರ್ಯ ನಡೆದಿಲ್ಲ. ಗ್ಯಾರಂಟಿ ಯೋಜನೆಯೆಂಬ ಕಾರ್ಯಕ್ರಮದ ಮೂಲಕ ಜನರ ಮುಂದೆ ಭ್ರಮಾಲೋಕ ಸೃಷ್ಟಿಸಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಯಾ ಬಜಾರ್ ಸರ್ಕಾರವಾಗಿದೆ ಎಂದು ಟೀಕಿಸಿದರು.

ADVERTISEMENT

ಇಲಾಖೆಗಳ ಸಮಸ್ಯೆಗಳಿಗೆ ಸ್ಪಂದನೆಯಿಲ್ಲ. ಬರೀ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತಿದೆ. ಒಂದೆಡೆ ಉಚಿತ ಎಂದು ಹೇಳುತ್ತ ಇನ್ನೊಂದೆಡೆ ದರ ಏರಿಕೆ ಮಾಡಿ ಜನಜೀವನದ ಮೇಲೆ ಬರೆ ಎಳೆಯಲಾಗುತ್ತಿದೆ.

ವರ್ಗಾವಣೆಯಲ್ಲಿ ಇಡಿ ಕಾಂಗ್ರೆಸ್ ಸರ್ಕಾರ ತಲ್ಲೀನವಾಗಿದೆ ಎಂದು ಆರೋಪಿಸಿದ ಕಾಗೇರಿ, ರಸ್ತೆಗಳ ನಿರ್ವಹಣೆ ಆಗುತ್ತಿಲ್ಲ. ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲ. ಮಳೆಗಾಲದ ಪೂರ್ವಸಿದ್ಧತೆ ಕಾಮಗಾರಿಯೇ ನಡೆದಿಲ್ಲ. ಇವುಗಳ ಜೊತೆ, ರೈತೋಪಯೋಗಿ ಯೋಜನೆಯಾಗಿದ್ದ ಕಿಸಾನ್ ಸಮ್ಮಾನ, ವಿದ್ಯಾರ್ಥಿ ಸ್ನೇಹಿ ವಿದ್ಯಾನಿಧಿ ಯೋಜನೆ ಸ್ಥಗಿತ ಮಾಡಲಾಗಿದೆ. ಅವುಗಳನ್ನು ಪುನರಾರಂಭಿಸಬೇಕು. ಬಿಜೆಪಿ ಅನುಷ್ಠಾನ ಮಾಡಿದ ಎಲ್ಲ ಕಾಮಗಾರಿಗಳು ಅನುಷ್ಠಾನ ಆಗಬೇಕು ಎಂದರು.

ಪಕ್ಷದ ಪ್ರಮುಖರಾದ ನರಸಿಂಹ ಹೆಗಡೆ, ಚಂದ್ರು ದೇವಾಡಿಗ, ಗಣಪತಿ ನಾಯ್ಕ, ನಂದನ ಸಾಗರ, ಆರ್.ಡಿ.ಹೆಗಡೆ, ರವಿ ಹಳದೋಟ, ರಾಜೇಶ ಶೆಟ್ಟಿ, ಸದಾನಂದ ಭಟ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.