
ಬೆಂಗಳೂರು: ‘ನಕ್ಸಲರಿಗೆ ಶರಣಾಗಲು ಕರೆ ನೀಡಿದ್ದು, ಕೆಲವು ಇಲಾಖೆಯವರು ನಕ್ಸಲರನ್ನು ಸಂಪರ್ಕಿಸಿ ಶರಣಾಗತಿಗೆ ಯತ್ನಿಸುತ್ತಿದ್ದಾರೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
ಡಿಜಿಪಿ ಪ್ರಣವ್ ಮೊಹಂತಿ ತಮ್ಮನ್ನು ಭೇಟಿಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಕ್ಸಲರ ಶರಣಾಗುವ ಬಗ್ಗೆ ಮಾತನಾಡಲು ಅವರು ಬಂದಿದ್ದರು. ಅವರಿಗೆ ಕೆಲವು ಸೂಚನೆಗಳನ್ನು ನೀಡಿದ್ದೇನೆ’ ಎಂದರು.
‘ಶರಣಾಗತಿ ಮಾಡಿಸುವುದೇ ಉತ್ತಮ. ಅವರು ಗುಂಡು ಹಾರಿಸುತ್ತಾರೆ, ನಮ್ಮವರು ಗುಂಡು ಹಾರಿಸುತ್ತಾರೆ. ಅದನ್ನು ಬದಿಗಿಟ್ಟು ಶರಣಾಗಲು ಈಗಾಗಲೇ ಮುಕ್ತ ಆಹ್ವಾನ ನೀಡಿದ್ದೇವೆ’ ಎಂದರು.
ಕಲಬುರಗಿ ಜೈಲಿನಲ್ಲಿ ಅವ್ಯವಸ್ಥೆ ಕುರಿತು ಮಾತನಾಡಿದ ಪರಮೇಶ್ವರ, ‘ಈ ಬಗ್ಗೆ ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಜೈಲರ್, ಅಧಿಕಾರಿಗಳ ತಪ್ಪಿದ್ದರೆ ಅವರ ಮೇಲೆ ಕ್ರಮ ಖಚಿತ’ ಎಂದರು.
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಬಗೆಹರಿಸುವುದು ಉದ್ದೇಶ. ಬಿಜೆಪಿಯವರು ಹೋರಾಟ ಮಾಡಲಿ, ಬೇಡ ಎನ್ನುವುದಿಲ್ಲ. ಆ ಭಾಗದ ಜನರ ಸಮಸ್ಯೆ ಕುರಿತು ಹೆಚ್ಚು ಚರ್ಚಿಸಲಿ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.