ADVERTISEMENT

ಎಚ್‌ಐವಿ ಬಾಧಿತ ಮಕ್ಕಳ ಆಶಾಕಿರಣ ತಬಸ್ಸುಮ್‌ಗೆ ಮಂಗಳೂರು ಪ್ರೆಸ್‌ ಕ್ಲಬ್ ಪ್ರಶಸ್ತಿ

ಎಚ್ಐವಿ ಬಾಧಿತ ಅನಾಥ ಮಕ್ಕಳ ಆಶಾಕಿರಣ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 13:49 IST
Last Updated 19 ಫೆಬ್ರುವರಿ 2020, 13:49 IST
ಸ್ನೇಹದೀಪ್ ಸಂಸ್ಥೆಯ ತಬಸ್ಸುಮ್
ಸ್ನೇಹದೀಪ್ ಸಂಸ್ಥೆಯ ತಬಸ್ಸುಮ್   

ಮಂಗಳೂರು:ಎಚ್ಐವಿ– ಏಡ್ಸ್ ಬಾಧಿತ ಮಕ್ಕಳ ಸೇವೆಯಲ್ಲಿ ತೊಡಗಿರುವ ಮಂಗಳೂರಿನ ಕೊಣಾಜೆಯ ತಬಸ್ಸುಮ್ ಈ ಬಾರಿಯ ‘ಮಂಗಳೂರು ಪ್ರೆಸ್‌ ಕ್ಲಬ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರೊ.ಬಾಲಕೃಷ್ಣ ಗಟ್ಟಿ, ಡಾ.ವಸಂತ ಕುಮಾರ್ ಪೆರ್ಲ ಮತ್ತು ಡಾ.ನಾಗವೇಣಿ ಮಂಚಿ ನೇತೃತ್ವದ ಸಮಿತಿಯು ಅವರನ್ನು ಆಯ್ಕೆ ಮಾಡಿದೆ. ಮಂಗಳೂರು ಪ್ರೆಸ್ ಕ್ಲಬ್ ಕೊಡಮಾಡುವ ಈ ಪ್ರಶಸ್ತಿಯು ₹10 ಸಾವಿರ ನಗದು, ಫಲಕ, ಪ್ರಮಾಣ ಪತ್ರ, ಸನ್ಮಾನವನ್ನು ಪ್ರಶಸ್ತಿ ಒಳಗೊಂಡಿದೆ.

‘ಇದೇ 29ರಂದು ಉರ್ವದ ರಾಧಾಕೃಷ್ಣ ಮಂದಿರದಲ್ಲಿ ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಕ್ಲಬ್‌ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ತಿಳಿಸಿದ್ದಾರೆ.

ADVERTISEMENT

ಕೊಣಾಜೆಯ ಅಬ್ದುಲ್ ಸಮದ್ ಮತ್ತು ಖೈರುನ್ನಿಸಾ ದಂಪತಿಯ ಪುತ್ರಿ ತಬಸ್ಸುಮ್ ಅವರಿಗೆ ಜೀವನದಲ್ಲಿ ದೊಡ್ಡ ಸಾಧನೆಗಳನ್ನು ಮಾಡುವ ಕನಸುಗಳಿದ್ದರೂ, ಪೂರಕ ಸಹಕಾರ ಸಿಗುತ್ತಿರಲಿಲ್ಲ. ಪದವಿ ತರಗತಿ ಆರಂಭಿಸುವಾಗಲೇ ಮದುವೆ ಮಾಡಿಕೊಡಲಾಗಿತ್ತು. ಆದರೂ, ಕೌಟುಂಬಿಕ ಜೀವನದ ನಡುವೆಯೇ ಎಚ್‌ಐವಿ, ಏಡ್ಸ್ ಬಾಧಿತ ಮಕ್ಕಳನ್ನು ಸಲಹುವ ಸ್ನೇಹದೀಪ್ ಸಂಸ್ಥೆ ಆರಂಭಿಸಿ ಕಾರ್ಯಪ್ರವೃತ್ತರಾಗಿದ್ದಾರೆ.

ಏಡ್ಸ್‌ನಿಂದ ಮೃತಪಟ್ಟ ಗೆಳತಿಯ ಮಕ್ಕಳನ್ನು ಸಾಕಲು ಆರಂಭಿಸಿದ ತಬಸ್ಸುಮ್, ಈ ಯೋಜನೆಗೆ ಮುಂದಾಗಿದ್ದರು. ಮಂಗಳೂರಿನ ಬಿಜೈ ಬಳಿ ಕಾರ್ಯಾಚರಿಸುತ್ತಿರುವ ಸ್ನೇಹದೀಪ್‌ನಲ್ಲಿಕಳೆದ ಒಂಬತ್ತು ವರ್ಷಗಳಿಂದ ಇಂತಹ ಮಕ್ಕಳನ್ನು ಸಾಕುತ್ತಿದ್ದಾರೆ.

ಏಡ್ಸ್‌ನಿಂದ ಅಸುನೀಗಿದ ಸುಮಾರು 19 ಮಕ್ಕಳ ಕೊನೆ ಕ್ಷಣದ ಆರೈಕೆಯನ್ನು ತಬಸ್ಸುಮ್ ಮಾಡಿದ್ದರು. ಆಯಾ ಮಕ್ಕಳಿಗೆ ಅವರವರ ಧರ್ಮಕ್ಕನುಗುಣವಾಗಿ ಅಂತಿಮ ಸಂಸ್ಕಾರ ನೆರವೇರಿಸಿದ್ದರು. ಸ್ನೇಹದೀಪ್‌ನಲ್ಲಿ ಈಗ ಬಾಧಿತ ಹಾಗೂ ಅನಾಥರಾದ 26 ಮಕ್ಕಳಿದ್ದಾರೆ. ಅವರಿಗೆ ಶಿಕ್ಷಣ, ಊಟ, ವಸತಿ, ಆರೋಗ್ಯದ ಸೇವೆಯನ್ನು ತನ್ನ ಮೂವರು ಸಿಬ್ಬಂದಿ ಜೊತೆ ನೀಡುತ್ತಿದ್ದಾರೆ. ಜೀವನೋಪಾಯಕ್ಕಾಗಿ ಅಂಗಡಿ ನಡೆಸುತ್ತಿರುವ ತಬಸ್ಸುಮ್, ಅದರಿಂದ ಬಂದ ಆದಾಯದಲ್ಲಿ ಸಂಸ್ಥೆ ನಡೆಸುತ್ತಿದ್ದಾರೆ. ಈಗೀಗ ದಾನಿಗಳೂ ನೆರವು ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.