ADVERTISEMENT

ಬೆಂಗಳೂರು: 'ಆಯುರ್ವೇದದಲ್ಲಿ ವೈಜ್ಞಾನಿಕ ಸಂಶೋಧನೆ ಹೆಚ್ಚಲಿ'

ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ಗಣ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 20:21 IST
Last Updated 25 ಡಿಸೆಂಬರ್ 2025, 20:21 IST
<div class="paragraphs"><p>ಗಿಡಕ್ಕೆ ನೀರೆರೆಯುವ ಮೂಲಕ&nbsp;ವಚನಾನಂದ ಸ್ವಾಮೀಜಿ,&nbsp;ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು&nbsp;ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು&nbsp;ಆಯುರ್ವೇದ ವಿಶ್ವ ಸಮ್ಮೇಳನ ಉದ್ಘಾಟಿಸಿದರು. ಪ್ರದೀಪ್ ಕುಮಾರ್ ಪ್ರಜಾಪತಿ, ಡಾ. ಗಿರಿಧರ ಕಜೆ, ದಿನೇಶ್ ಗುಂಡೂರಾವ್, ಕೌಸ್ತುಭ ಉಪಾಧ್ಯಾಯ ಮತ್ತು ಜಯಶ್ರೀ ಉಳ್ಳಾಲ್ ಉಪಸ್ಥಿತರಿದ್ದರು </p></div>

ಗಿಡಕ್ಕೆ ನೀರೆರೆಯುವ ಮೂಲಕ ವಚನಾನಂದ ಸ್ವಾಮೀಜಿ, ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಆಯುರ್ವೇದ ವಿಶ್ವ ಸಮ್ಮೇಳನ ಉದ್ಘಾಟಿಸಿದರು. ಪ್ರದೀಪ್ ಕುಮಾರ್ ಪ್ರಜಾಪತಿ, ಡಾ. ಗಿರಿಧರ ಕಜೆ, ದಿನೇಶ್ ಗುಂಡೂರಾವ್, ಕೌಸ್ತುಭ ಉಪಾಧ್ಯಾಯ ಮತ್ತು ಜಯಶ್ರೀ ಉಳ್ಳಾಲ್ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಆರೋಗ್ಯಯುತ ಜೀವನಕ್ಕೆ ಆಯುರ್ವೇದ ಸಹಕಾರಿಯಾಗಿದೆ. ಈ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದಂತೆ ದಾಖಲೆ ಆಧಾರಿತ ವೈಜ್ಞಾನಿಕ ಸಂಶೋಧನೆಗಳು ಹೆಚ್ಚಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು’ ಎಂಬ ಒಕ್ಕೊರಲ ಆಗ್ರಹ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ವ್ಯಕ್ತವಾಯಿತು. 

ADVERTISEMENT

ಆಯುಷ್ ಸಚಿವಾಲಯ ಹಾಗೂ ರಾಜ್ಯ ಆಯುಷ್ ಇಲಾಖೆಯ ಸಹಯೋಗದಲ್ಲಿ ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಷನ್ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ಈ ಸಮ್ಮೇಳನಕ್ಕೆ ಗುರುವಾರ ಚಾಲನೆ ದೊರೆಯಿತು. 

ರಾಜ್ಯಸಭೆ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರಹೆಗ್ಗಡೆ, ‘ಆಯುರ್ವೇದ ಕ್ಷೇತ್ರದಲ್ಲಿ ಸಂಶೋಧನೆ ಹೆಚ್ಚಿದರೆ ಔಷಧ ವಿತರಣೆ ಹಾಗೂ ಚಿಕಿತ್ಸೆಗೆ ಸಹಕಾರಿಯಾಗಲಿದೆ. ಈ ಕ್ಷೇತ್ರದಲ್ಲಿ ಚಿಕಿತ್ಸೆ ಒದಗಿಸುತ್ತಿರುವವರು ಹಾಗೂ ಆಯುರ್ವೇದ ಅಧ್ಯಯನ ಮಾಡುತ್ತಿರುವವರು ಹಿಂಜರಿಯಬೇಕಿಲ್ಲ. ಈ ಚಿಕಿತ್ಸಾ ಪದ್ಧತಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುತ್ತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ, ವೈಜ್ಞಾನಿಕ ಸಂಶೋಧನೆಗಳಿಗೆ ಆದ್ಯತೆ ನೀಡಬೇಕು. ಸ್ಥಳೀಯ ಆಯುರ್ವೇದ ತಜ್ಞರನ್ನೂ ಪ್ರೋತ್ಸಾಹಿಸಬೇಕು’ ಎಂದರು. 

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಆಯುರ್ವೇದವು ವಿಜ್ಞಾನದ ಆಧಾರದ ಮೇಲೆ ನಿಂತಿದೆ. ಈ ಪದ್ಧತಿಯ ಮಹತ್ವ ಎಲ್ಲರಿಗೂ ತಿಳಿಯಬೇಕು. ಬದಲಾದ ಜೀವನಶೈಲಿಯಿಂದ ಕ್ಯಾನ್ಸರ್, ಹೃದ್ರೋಗದಂತಹ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚುತ್ತಿವೆ. ಆರೋಗ್ಯಕರ ಜೀವನಕ್ಕೆ ಆಯುರ್ವೇದ ಸಹಕಾರಿ. ರೋಗ ಬಂದಾಗ ಔಷಧಗಳ ಮೊರೆ ಹೋಗುವ ಬದಲು, ರೋಗ ಬರದಂತೆ ಆರೋಗ್ಯ ಕಾಪಾಡಿಕೊಳ್ಳಬೇಕು. ಯೋಗ ಮತ್ತು ಆಯುರ್ವೇದ ಹಲವಾರು ಅನಾರೋಗ್ಯ ಸಮಸ್ಯೆಗಳ ತಡೆಗೆ ಸಹಕಾರಿ. ಆಯುರ್ವೇದದಲ್ಲಿ ಸರಿಯಾದ ಸಂಶೋಧನೆ ನಡೆಯಬೇಕು. ಈ ಚಿಕಿತ್ಸಾ ಪದ್ಧತಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಆಯುಷ್ ಸಚಿವಾಲಯದ ಸಲಹೆಗಾರ ಕೌಸ್ತುಭ ಉಪಾಧ್ಯಾಯ, ‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಪರಿಷತ್ತು (ಎನ್‌ಸಿಆರ್‌ಟಿ) ಪಠ್ಯದಲ್ಲಿ ಆಯುರ್ವೇದವನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರವು ಸೆ.23ರಂದು ಆಯುರ್ವೇದ ದಿನವನ್ನು ಆಚರಿಸುತ್ತಿದ್ದು, ಒಂದು ತಿಂಗಳು ಪೂರ್ತಿ ಶಾಲೆಗಳಲ್ಲಿ ಆಯುರ್ವೆದದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆಯುರ್ವೇದಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ದಾಖಲೆಗಳನ್ನು ಒದಗಿಸಲು ವಿವಿಧ ಸಂಶೋಧನಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ವಾಟ್ಸ್‌ ಆ್ಯಪ್, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಆರೋಗ್ಯ ಸಲಹೆಗಳೆಲ್ಲ ಆಯುರ್ವೇದವಲ್ಲ. ಸತ್ಯಾಸತ್ಯತೆ ಪರಿಶೀಲಿಸಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದರು.  

ತರಳಬಾಳು ಜಗದ್ಗುರು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಆಯುರ್ವೇದದ ಮಹತ್ವ ವಿವರಿಸಿದರು. ನವದೆಹಲಿಯ ಅಖಿಲ ಭಾರತೀಯ ಆಯುರ್ವೇದ ಸಂಸ್ಥೆಯ (ಎಐಐಎ) ನಿರ್ದೇಶಕ ಪ್ರದೀಪ್ ಕುಮಾರ್ ಪ್ರಜಾಪತಿ, ಹಿಮಾಲಯ ವೆಲ್‌ನೆಸ್ ಕಂಪನಿ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜಯಶ್ರೀ ಉಳ್ಳಾಲ್ ಉಪಸ್ಥಿತರಿದ್ದರು.

ಜೀವನದಲ್ಲಿ ಯೋಗ ಮತ್ತು ಆಯುರ್ವೇದವನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯಯುತ ಜೀವನಕ್ಕೆ ಇವೆರಡೂ ಸಹಕಾರಿಯಾಗಲಿವೆ

-ವಚನಾನಂದ ಸ್ವಾಮೀಜಿ ಹರಿಹರದ ಪಂಚಮಸಾಲಿ ಪೀಠ

ಆಯುರ್ವೇದ ಕೋಟ್ಯಂತರ ಜನರ ಆಯ್ಕೆಯಾಗಿದ್ದು ಈ ಚಿಕಿತ್ಸಾ ಪದ್ಧತಿಗೆ ಪರ್ಯಾಯವಿಲ್ಲ. ರೋಗ ಬರದಂತೆ ತಡೆಯಲೂ ಆಯುರ್ವೇದ ಸಹಕಾರಿ

- ಡಾ.ಗಿರಿಧರ ಕಜೆ ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಷನ್ ಸಂಸ್ಥಾಪಕ

‘ಮಕ್ಕಳಿಗೆ ಆಯುರ್ವೇದ ಬೋಧಿಸಿ’

‘ಸದ್ಯ 12ನೇ ತರಗತಿ ಬಳಿಕ ಆಯುರ್ವೇದ ಕಲಿಕೆಗೆ ಅವಕಾಶಗಳಿವೆ. ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿಯೇ ಆಯುರ್ವೇದವನ್ನು ಪರಿಚಯಿಸಬೇಕಿದೆ. ಈ ನಿಟ್ಟಿನಲ್ಲಿ ಶಾಲಾ ಪಠ್ಯದಲ್ಲಿ ಆಯುರ್ವೇದ ಅಳವಡಿಸಿ ಒಂದನೇ ತರಗತಿಯಿಂದಲೇ ಬೋಧಿಸಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಈ ಬಗ್ಗೆ ಗಮನಹರಿಸಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಆಗ್ರಹಿಸಿದರು. ‘ಚಿಕ್ಕ ವಯಸ್ಸಿನಿಂದ ಆಯುರ್ವೇದ ಹೇಳಿಕೊಟ್ಟರೆ 12ನೇ ತರಗತಿ ವೇಳೆಗೆ ಆಯುರ್ವೇದದ ಮೂಲಭೂತ ಜ್ಞಾನ ದೊರೆಯುತ್ತದೆ. ಮುಂದೆ ಉನ್ನತ ಅಧ್ಯಯನ ಸಾಧ್ಯವಾಗುತ್ತದೆ. ಆಯುರ್ವೇದ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಕೇವಲ ಆಯುರ್ವೇದ ತಿಳಿದುಕೊಂಡರೆ ಸಾಲದು ಇದಕ್ಕೆ ಪೂರಕ ವಿವಿಧ ವಿದ್ಯೆಗಳನ್ನು ತಿಳಿದುಕೊಳ್ಳಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.