ADVERTISEMENT

ಆಯುಷ್ ವೈದ್ಯರು ಅಲೋಪಥಿ ಔಷಧ ಕೊಡುವಂತಿಲ್ಲ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 17:01 IST
Last Updated 8 ಸೆಪ್ಟೆಂಬರ್ 2020, 17:01 IST
   

ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯಾಧಿಕಾರಿಗಳಿಗೆ ತುರ್ತು ಸಂದರ್ಭಗಳಲ್ಲಿ ಅಲೋಪಥಿ ಔಷಧಗಳನ್ನು ಬಳಸಲು ನೀಡಲಾಗಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ.

ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940 ಮತ್ತು 1945ರ ನಿಯಮಾವಳಿಯಡಿ ಸರ್ಕಾರವು ಆಯುಷ್ ವೈದ್ಯಾಧಿಕಾರಿಗಳಿಗೆ ತುರ್ತು ಸಂದರ್ಭದಲ್ಲಿ ಹಾಗೂ ಅವಶ್ಯವಿದ್ದಾಗ ಅಲೋಪಥಿ ಔಷಧಗಳನ್ನು ನೀಡಲು ಅವಕಾಶ ನೀಡಿತ್ತು. ಈ ರೀತಿ ಔಷಧ ನೀಡಲು ಕೆಲ ಷರತ್ತುಗಳನ್ನು ಕೂಡ ಸರ್ಕಾರ ವಿಧಿಸಿತ್ತು. ಔಷಧ ಶಾಸ್ತ್ರ ವಿಷಯ ಸೇರಿದಂತೆ ಅಲೋಪಥಿಯ ವಿವಿಧ ಚಿಕಿತ್ಸಾ ಪದ್ಧತಿ ಮತ್ತು ಕ್ರಮಗಳ ಬಗ್ಗೆ 6 ತಿಂಗಳ ತರಬೇತಿ ಕಾರ್ಯಕ್ರಮವನ್ನು ಆಯಾ ಜಿಲ್ಲಾ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿತ್ತು.

ಡಾ. ಪೂನಂ ವರ್ಮಾ ವಿರುದ್ಧ ಅಶ್ವಿನಿ ಪಟೇಲ್‌ ಮತ್ತು ಇತರರು, ಡಾ.ಎ.ಕೆ. ಸಭಾಪತಿ ವಿರುದ್ಧ ಕೇರಳ ರಾಜ್ಯ ಹಾಗೂ ಇತರರು ಪ್ರಕರಗಳಲ್ಲಿ‌ ಆಯುಷ್ ವೈದ್ಯರಿಗೆ ಅಲೋಪಥಿ ಔಷಧಿ ಒದಗಿಸಲು ಅವಕಾಶ ನೀಡುವ ಹಾಗಿಲ್ಲ ಎಂದುಸುಪ್ರೀಂ ಕೋರ್ಟ್ ತಿಳಿಸಿದೆ. ಹೀಗಾಗಿ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸರ್ಕಾರದ ಈ ಆದೇಶವನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸ್ವಾಗತಿಸಿದೆ.

ADVERTISEMENT

ಸರ್ಕಾರದ ವಿರುದ್ಧ ಹೋರಾಟ: ‘ಆಯುಷ್ ವೈದ್ಯರು ವೈದ್ಯಕೀಯ ಕೋರ್ಸ್ ವೇಳೆ ಅಲೋಪಥಿ ಪದ್ಧತಿಯಬಗ್ಗೆಯೂ ಅಧ್ಯಯನ ಮಾಡಿರುತ್ತಾರೆ. ಮಹಾರಾಷ್ಟ್ರ, ತಮಿಳುನಾಡು, ಹಿಮಾಚಲ ಪ್ರದೇಶ, ಜಾರ್ಖಂಡ್, ಉತ್ತರ ಪ್ರದೇಶ ಸೇರಿದಂತೆ 12 ರಾಜ್ಯಗಳಲ್ಲಿ ಆಯುಷ್ ವೈದ್ಯರಿಗೆ ಅಲೋಪಥಿ ಔಷಧ ನೀಡಲು ಅನುಮತಿ ನೀಡಲಾಗಿದೆ. ಯಾವುದೋ ಎರಡು ನಿರ್ದಿಷ್ಟ ಪ್ರಕರಣಗಳಿಗೆ ಕೋರ್ಟ್ ನೀಡಿರುವ ತೀರ್ಪುಗಳನ್ನು ಆಧರಿಸಿ ಸರ್ಕಾರವು ಏಕ ಮುಖವಾಗಿ ನಿರ್ಣಯ ಕೈಗೊಂಡಿದೆ. ಸರ್ಕಾರದ ಈ ಆದೇಶದ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಆಯುಷ್ ವೈದ್ಯರು ತಿಳಿಸಿದ್ದಾರೆ.

ಆಲ್‌ ಇಂಡಿಯಾ ಆಯುಷ್ ಫೆಡರೇಷನ್ ರಾಜ್ಯ ಸಲಹೆಗಾರ ಡಾ. ಮಹಾವೀರ್, ‘ಅಲೋಪಥಿ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ವೈದ್ಯಕೀಯ ಸೇವೆ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಈ ಆದೇಶ ಹಿಂಪಡೆಯುವಂತೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗುವುದು. ಒಂದು ವೇಳೆ ಆದೇಶ ಹಿಂಪಡೆಯದಿದ್ದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.