ADVERTISEMENT

ದೇಶದಾದ್ಯಂತ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸುವ ಗುರಿ

ಭಾರತ ವಾಕ್‌ ಮತ್ತು ಶ್ರವಣ ಸಂಘದ ವಾರ್ಷಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 20:50 IST
Last Updated 19 ಫೆಬ್ರುವರಿ 2022, 20:50 IST
ಭಾರತ ವಾಕ್‌ ಮತ್ತು ಶ್ರವಣ ಸಂಘದ ಸಮ್ಮೇಳನದಲ್ಲಿ ಡಾ.ಯು.ಅಜಿತ್‌ ಕುಮಾರ್‌, ಡಾ.ಎಂ.‍ಪುಷ್ಪಾವತಿ ಮತ್ತು ರಾಜಪಾಂಡಿಯನ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ವೈ.ಕೃಷ್ಣ, ಡಾ.ಎಂ.ಜಯರಾಮ್‌, ಸುಮನ್‌ ಕುಮಾರ್, ಎ.ಎಂ.ಅಚ್ಚಯ್ಯ ಇದ್ದಾರೆ
ಭಾರತ ವಾಕ್‌ ಮತ್ತು ಶ್ರವಣ ಸಂಘದ ಸಮ್ಮೇಳನದಲ್ಲಿ ಡಾ.ಯು.ಅಜಿತ್‌ ಕುಮಾರ್‌, ಡಾ.ಎಂ.‍ಪುಷ್ಪಾವತಿ ಮತ್ತು ರಾಜಪಾಂಡಿಯನ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ವೈ.ಕೃಷ್ಣ, ಡಾ.ಎಂ.ಜಯರಾಮ್‌, ಸುಮನ್‌ ಕುಮಾರ್, ಎ.ಎಂ.ಅಚ್ಚಯ್ಯ ಇದ್ದಾರೆ   

ಮೈಸೂರು: ‘ಆಯುಷ್ಮಾನ್‌ ಭಾರತ್‌ ಅಡಿಯಲ್ಲಿ ದೇಶದಾದ್ಯಂತ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸುವ ಗುರಿಯಿದ್ದು, ಈಗಾಗಲೇ 91 ಸಾವಿರ ಕೇಂದ್ರಗಳನ್ನು ಆರಂಭಿಸಲಾಗಿದೆ’ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್ಎಂ) ನಿರ್ದೇಶಕ ವಿಕಾಸ್‌ ಶೀಲ್‌ ಹೇಳಿದರು.

ಅಖಿಲ ಭಾರತ ವಾಕ್‌ ಶ್ರವಣ ಸಂಸ್ಥೆಯ (ಆಯಿಷ್) ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಭಾರತ ವಾಕ್‌ ಮತ್ತು ಶ್ರವಣ ಸಂಘದ (ಇಶಾ) 53ನೇ ವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.

'ಆರೋಗ್ಯ ಕ್ಷೇತ್ರದ ಸುಧಾರಣೆಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ವಹಿಸಬೇಕಿದೆ. 2011ರ ಜನಗಣತಿ ಪ್ರಕಾರ ದೇಶದಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಸಂವಹನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆಯಿದೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರವು ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸ್ವಂತ ಉದ್ಯಮ ಆರಂಭಿಸುವುದನ್ನು ಪ್ರೋತ್ಸಾಹಿಸಲು ‘ಸ್ಟಾರ್ಟ್‌ ಅಪ್‌ ಇಂಡಿಯಾ’ ಹಾಗೂ ‘ಮೇಕ್‌ ಇನ್‌ ಇಂಡಿಯಾ’ ಅಭಿಯಾನ ನಡೆಸುತ್ತಿದೆ. ಸಂವಹನ ತೊಂದರೆಯಿಂದ ಬಳಲುತ್ತಿರುವವರಿಗೆ ನೆರವಾಗಲು ಯುವ ಸಮೂಹವು ಸರ್ಕಾರದ ಈ ಯೋಜನೆಗಳನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸನ್ಮಾನ: ಆಯಿಷ್‌ ನಿರ್ದೇಶಕರಾದ ಡಾ.ಎಂ.‍ಪುಷ್ಪಾವತಿ ಅವರಿಗೆ ‘ಡಾ.ಎನ್‌.ರತ್ನ ಒರೇಷನ್‌’ ಪ್ರಶಸ್ತಿ, ಶ್ರವಣ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಯು.ಅಜಿತ್‌ ಕುಮಾರ್‌ ಅವರಿಗೆ ‘ಪ್ರೊ.ಎಸ್‌.ಕಾಮೇಶ್ವರನ್‌ ಎಂಡೋಮೆಂಟ್‌ ಒರೇಷನ್‌’ ಪ್ರಶಸ್ತಿ ಹಾಗೂ ರಾಜಪಾಂಡಿಯನ್‌ ಅವರಿಗೆ ‘ಪ್ರೊ.ಆರ್‌.ಕೆ.ಓಜಾ ಒರೇಷನ್‌ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಎರಡು ದಿನಗಳ ಸಮ್ಮೇಳನದಲ್ಲಿ ದೇಶ ಹಾಗೂ ವಿದೇಶದ 16 ತಜ್ಞರು ಉಪನ್ಯಾಸ ನೀಡಲಿದ್ದಾರೆ. 36 ಸಂಶೋಧನಾ ವಿಷಯ ಮಂಡನೆ ಹಾಗೂ 115 ಪೋಸ್ಟರ್‌ ಪ್ರೆಸೆಂಟೇಷನ್‌ ನಡೆಯಲಿದೆ.

ಇಶಾ ಕಾರ್ಯದರ್ಶಿ ಸುಮನ್‌ ಕುಮಾರ್, ಖಜಾಂಚಿ ಎ.ಎಂ.ಅಚ್ಚಯ್ಯ, ನಿರ್ಗಮಿತ ಅಧ್ಯಕ್ಷ ಡಾ.ವೈ.ಕೃಷ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.