ಸಚಿವ ಸಂಪುಟ ಸಭೆ
– ಪ್ರಜಾವಾಣಿ ಚಿತ್ರ
ಪ್ರಜಾವಾಣಿ ವಾರ್ತೆ
ಬೆಂಗಳೂರು: 15ನೇ ಹಣಕಾಸು ಆಯೋಗದ ಅನುದಾನದಲ್ಲಿ 2025-26ನೇ ಸಾಲಿನಲ್ಲಿ ರಾಜ್ಯದಾದ್ಯಂತ 114 ‘ಆಯುಷ್ಮಾನ್ ಆರೋಗ್ಯ ಮಂದಿರ’ಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ₹ 74.10 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ‘ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ಈ ಆರೋಗ್ಯ ಮಂದಿರಗಳನ್ನು ನಿರ್ಮಿಸಲಾಗುವುದು’ ಎಂದರು.
‘ಕೆಟಿಟಿಪಿ ಕಾಯ್ದೆ ಹಾಗೂ ನಿಯಮಗಳ ಅನುಸಾರ ಟೆಂಡರ್ ಆಹ್ವಾನಿಸಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಇಂತಹ ಮಂದಿರಗಳ ನಿರ್ಮಾಣ ಆಯುಷ್ಮಾನ್ ಭಾರತ ಯೋಜನೆಯ ಪ್ರಮುಖ ಅಂಶವಾಗಿದ್ದು, ಜನ ಕೇಂದ್ರಿತ ಚಿಕಿತ್ಸಾ ಸೌಲಭ್ಯ ಕಲ್ಪಿಸುವುದು ಉದ್ದೇಶ’ ಎಂದರು.
‘ಕಲಬೆರಕೆಯ ಔಷಧ ಅಥವಾ ಸೌಂದರ್ಯವರ್ಧಕವನ್ನು ಮಾರಾಟ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ‘ಔಷಧಗಳು ಮತ್ತು ಸೌಂದರ್ಯವರ್ಧಕಗಳು (ಕರ್ನಾಟಕ ತಿದ್ದುಪಡಿ) ಮಸೂದೆ– 2025’ಗೆ ಅನುಮೋದನೆ ನೀಡಲಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು’ ಎಂದರು.
‘ಕೇಂದ್ರದ ಔಷಧ ಪ್ರಯೋಗಾಲಯಗಳ ಮತ್ತು ಔಷಧ ಮತ್ತು ಸೌಂದರ್ಯವರ್ಧಕಗಳ ಇಲಾಖೆಯ ನಿರ್ದೇಶಕರ ಕೆಲಸ ಕಾರ್ಯಗಳನ್ನು ರಾಜ್ಯ ಸರ್ಕಾರ ನಿಗದಿಪಡಿಸಿದ ಪ್ರಾಧಿಕಾರ ನಿರ್ವಹಿಸಲು ಕೂಡಾ ಮಸೂದೆ ಅವಕಾಶ ಮಾಡಿಕೊಡಲಿದೆ. ಕಲಬೆರಕೆಯ ಔಷಧ ಮತ್ತು ಸೌಂದರ್ಯವರ್ಧಕ ಹೊಂದಿರುವ ಅಪರಾಧಗಳನ್ನು ಜಾಮೀನುರಹಿತ ಅಪರಾಧವೆಂದು ಪರಿಗಣಿಸುವ ಪ್ರಸ್ತಾವವೂ ಮಸೂದೆಯಲ್ಲಿದೆ’ ಎಂದರು.
ಸಂಪುಟ ಸಭೆಯ ಇತರ ನಿರ್ಣಯಗಳು
* ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಚೆಕ್-ಡ್ಯಾಂಗಳ ನಿರ್ಮಾಣ, ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ₹200 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಒಪ್ಪಿಗೆ
* ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕೆಲವು ನಗರ ಸ್ಥಳೀಯ ಸಂಸ್ಥೆಗಳನ್ನು ಮತ್ತು ಕೆಲವು ಗ್ರಾಮಗಳನ್ನು ಸೇರ್ಪಡೆಗೊಳಿಸಿ ‘ಬೃಹತ್ ಮೈಸೂರು ಮಹಾನಗರಪಾಲಿಕೆ’ಯಾಗಿ ಪರಿವರ್ತನೆ
* ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ‘ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ’ ಎಂದು ಮರು ನಾಮಕರಣ ಮಾಡಲು ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳು (ಎರಡನೇ ತಿದ್ದುಪಡಿ) ಮಸೂದೆ– 2025’ಕ್ಕೆ ಒಪ್ಪಿಗೆ
* ಕರ್ನಾಟಕ ‘ರಾಜ್ಯ ಹಜ್ ಸಮಿತಿ ನಿಯಮಾವಳಿ– 2025’ಕ್ಕೆ ಅನುಮೋದನೆ
* ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದ ಸ.ನಂ.47ರಲ್ಲಿ 3-12 ಎಕರೆ ಜಮೀನನ್ನು ಬಸ್ ನಿಲ್ದಾಣ ಮತ್ತು ಬಸ್ ಡಿಪೋ ನಿರ್ಮಾಣಕ್ಕೆ ಕೆಎಸ್‌ಆರ್‌ಟಿಸಿಗೆ ಉಚಿತವಾಗಿ ಮಂಜೂರು
* ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ-ಭಟ್ಕಳ ವಿಧಾನಸಭಾ ಕ್ಷೇತ್ರದ ಮುಳ್ಕೊಡು ಗ್ರಾಮದ ಸಮೀಪ ಶರಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ (ಉಪ್ಪು ನೀರು ತಡೆ ಅಣೆಕಟ್ಟು) ₹200 ಕೋಟಿ ಅಂದಾಜು ಮೊತ್ತದಲ್ಲಿ ನಿರ್ಮಾಣ
* ಚಂದ್ರಗುತ್ತಿ ಶ್ರೀ ರೇಣುಕಾಂಬ ಅಭಿವೃದ್ಧಿ ಪ್ರಾಧಿಕಾರ ಮಸೂದೆ– 2025ಕ್ಕೆ ಅನುಮೋದನೆ
* ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಹೊರವಲಯದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ನೂತನ ಸ್ಯಾಟ್ ಲೈಟ್ ಬಸ್ ನಿಲ್ದಾಣ ₹ 17.50 ಕೋಟಿ ಮೊತ್ತದಲ್ಲಿ ನಿರ್ಮಾಣ
* ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 1,000 ಚಾಲಕರ ನೇಮಕಾತಿಗೆ 2019ರಲ್ಲಿ ಹೊರಡಿಸಿದ್ದ ಪ್ರಕಟಣೆಯಂತೆ ನೇಮಕಾತಿ ಪ್ರಕ್ರಿಯೆ ನಡೆಸಲು ಒಪ್ಪಿಗೆ
* ಕಬಿನಿ ಎಡದಂಡೆ ನಾಲೆಯ ಡೀಪ್ ಕಟ್ ಭಾಗಕ್ಕೆ ಕಟ್ ಆ್ಯಂಡ್ ಕವರ್ ಹಾಗೂ ಅಡ್ಡಮೋರಿಗಳ ನಿರ್ಮಾಣ ಕಾಮಗಾರಿ ಮತ್ತು ಕಬಿನಿ ಎಡದಂಡೆ ನಾಲೆಯ ವಿತರಣಾ ಕಾಲುವೆ-1 ರಿಂದ 19ರವರೆಗಿನ ಅಭಿವೃದ್ಧಿ ಕಾಮಗಾರಿಗಳನ್ನು ₹ 50 ಕೋಟಿಯಲ್ಲಿ ಕೈಗೊಳ್ಳಲು ಸಹಮತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.