ADVERTISEMENT

ಪರಿಷತ್ತಿನಲ್ಲಿ ಆಜಾನ್‌, ಭಜನೆ, ಪಟಾಕಿ ಗದ್ದಲ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 16:09 IST
Last Updated 16 ಡಿಸೆಂಬರ್ 2025, 16:09 IST
ಲೌಡ್‌ ಸ್ಪೀಕರ್‌ ಬಳಸಿ ಆಜಾನ್‌ ಕೂಗುವುದರಿಂದ ತಮ್ಮ ನಿದ್ದೆ ಹಾಳಾಗುತ್ತಿದೆ ಎಂದು ಬಿಜೆಪಿಯ ಡಿ.ಎಸ್‌.ಅರುಣ್ ಅವರು ವಿಧಾನ ಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಿದರು    –ಪ್ರಜಾವಾಣಿ ಚಿತ್ರ
ಲೌಡ್‌ ಸ್ಪೀಕರ್‌ ಬಳಸಿ ಆಜಾನ್‌ ಕೂಗುವುದರಿಂದ ತಮ್ಮ ನಿದ್ದೆ ಹಾಳಾಗುತ್ತಿದೆ ಎಂದು ಬಿಜೆಪಿಯ ಡಿ.ಎಸ್‌.ಅರುಣ್ ಅವರು ವಿಧಾನ ಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಿದರು    –ಪ್ರಜಾವಾಣಿ ಚಿತ್ರ    

ಸುವರ್ಣ ವಿಧಾನಸೌಧ (ಬೆಳಗಾವಿ): ‘ಕತ್ತಲಿನ ವೇಳೆ ಮಸೀದಿಗಳಲ್ಲಿ ಲೌಡ್‌ಸ್ಪೀಕರ್‌ ಬಳಸಿ ಆಜಾನ್‌ ಕೂಗಲು ಇರುವ ನಿರ್ಬಂಧವು ಸರಿಯಾಗಿ ಪಾಲನೆಯಾಗುತ್ತಿಲ್ಲ. ಇದರಿಂದ ನಿದ್ರೆಗೆ ತೊಂದರೆಯಾಗುತ್ತಿದೆ’ ಎಂದ ಬಿಜೆಪಿಯ ಡಿ.ಎಸ್‌.ಅರುಣ್ ಅವರ ಮಾತು ವಿಧಾನ ಪರಿಷತ್ತಿನಲ್ಲಿ ಕೆಲಕಾಲ ಗದ್ದಲಕ್ಕೆ ಕಾರಣವಾಯಿತು.

ಪರಿಷತ್ತಿನಲ್ಲಿ ಮಂಗಳವಾರ ಪ್ರಶ್ನೋತ್ತರದ ವೇಳೆ ಅರುಣ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಅವರನ್ನು ಪ್ರಶ್ನಿಸಿದರು. ‘ನಾನು ಎಷ್ಟೋ ಬಾರಿ ನಸುಕಿನ 4.30-4.45ರ ಹೊತ್ತಿಗೆ ಮನೆಗೆ ಹೋಗುತ್ತೇನೆ. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ, ನಮ್ಮ ಮನೆಯ ಹಿಂದಿರುವ ಮಸೀದಿಯಲ್ಲಿ 5 ಗಂಟೆಗೆ ಜೋರಾಗಿ ಆಜಾನ್‌ ಕೂಗುತ್ತಾರೆ. ನನ್ನ ನಿದ್ದೆ ಹೋಗುತ್ತದೆ’ ಎಂದರು.

‘ಈ ಬಗ್ಗೆ ದೂರು ನೀಡಲು ಯಾರಿಗೂ ಧೈರ್ಯವಿಲ್ಲ. ಅಂತಹ ಸ್ಥಿತಿ ಇದೆ. ನಮ್ಮ ಭಜನೆ ಮತ್ತಿತರ ಕಾರ್ಯಕ್ರಮಗಳಿಗೆ ಪೊಲೀಸರು ಅಡ್ಡಿಪಡಿಸುತ್ತಾರೆ. ಆದರೆ ಮಸೀದಿಗೆ ಹೋಗಿ ಮನವಿ ಸಲ್ಲಿಸುತ್ತಾರೆ. ಈ ಸ್ಥಿತಿ ಬದಲಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಚಿವ ಈಶ್ವರ ಖಂಡ್ರೆ, ‘ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ. ಭಜನೆ, ಕೀರ್ತನೆ, ದೀಪಾವಳಿ ಮತ್ತು ದೇವಾಲಯಗಳಿಗೂ ಅನ್ವಯವಾಗುತ್ತದೆ. ಆಜಾನ್‌ಗೂ ಅನ್ವಯವಾಗುತ್ತದೆ’ ಎಂದರು. ಇದಕ್ಕೆ ಬಿಜೆಪಿಯ ಕೇಶವಪ್ರಸಾದ್‌, ಭಾರತಿ ಶೆಟ್ಟಿ ಆಕ್ಷೇಪ ಎತ್ತಿದರು. 

ಆಗ ಸಭಾಪತಿ ಬಸವರಾಜ ಹೊರಟ್ಟಿ, ‘ಸದಸ್ಯರು ಕೇಳಿದ ಪ್ರಶ್ನೆಗಷ್ಟೇ ಉತ್ತರಿಸಿ. ಆ ಬಗ್ಗೆ ಏನು ಮಾಡುತ್ತೀರಿ ಎಂಬುದನ್ನಷ್ಟೇ ಹೇಳಿ’ ಎಂದರು. 

ಭಾರತಿ ಶೆಟ್ಟಿ ಅವರು, ‘ಈ ಹಬ್ಬಗಳೆಲ್ಲಾ ವರ್ಷದಲ್ಲಿ ಯಾವುದೋ ಒಂದು ದಿನ ನಡೆಯುತ್ತದೆ. ಅವರೂ ಬೇಕಿದ್ದಲ್ಲಿ ಒಂದು ತಿಂಗಳು ಹಬ್ಬ ಮಾಡಲಿ. ಆದರೆ ಅವರು ವರ್ಷಪೂರ್ತಿ, ಹಗಲೂ ರಾತ್ರಿ ಆಜಾನ್‌ ಕೂಗುತ್ತಾರೆ’ ಎಂದರು. ಅರುಣ್, ‘ಪ್ರತಿದಿನ ಐದು ಬಾರಿ ಆಜಾನ್‌ ಕೂಗುತ್ತಾರೆ. ಈ ಸರ್ಕಾರದಲ್ಲಿ ಅದು ಹೆಚ್ಚಾಗಿದೆ’ ಎಂದರು. ಭಾರತಿ ಶೆಟ್ಟಿ, ‘ಈ ಸರ್ಕಾರದಲ್ಲಿ ಇದೆಲ್ಲಾ ವಿಪರೀತ ಹೆಚ್ಚಾಗಿದೆ’ ಎಂದು ದನಿಗೂಡಿಸಿದರು. 

ಆಗ ಸಚಿವ ಖಂಡ್ರೆ, ‘ಇದು ಸೂಕ್ಷ್ಮ ವಿಚಾರ. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು. ಕಾನೂನು ಎಲ್ಲರಿಗೂ ಒಂದೇ’ ಎಂದು ಪುನರುಚ್ಚರಿಸಿದರು. ಬಿಜೆಪಿಯ ಹಲವು ಸದಸ್ಯರು ಎದ್ದುನಿಂತು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಗದ್ದಲ ಹೆಚ್ಚಾದಾಗ ಸಭಾಪತಿ ಅವರು, ಎಲ್ಲರನ್ನೂ ಸಮಾಧಾನಪಡಿಸಿ ಕೂರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.