ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕೆಮ್ಮಣ್ಣುಗುಂಡಿಗಿರಿಧಾಮ ಮುಂದಿನ ದಿನಗಳಲ್ಲಿ ಕೆಂಪು ಅಜೆಲಿಯಾ ‘ಪುಷ್ಪ ಕಣಿವೆ’ಯಾಗಿ ಕಂಗೊಳಿಸಲಿದೆ.
‘ಪುಷ್ಪ ಕಣಿವೆಯಿಂದ ಗಿರಿಧಾಮವು ಇನ್ನಷ್ಟು ಆರ್ಕಷಣೀಯವಾಗಲಿದೆ. ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಸಾಧ್ಯ. ಇದೇ ಮೇ ಅಂತ್ಯ ಅಥವಾ ಜೂನ್‌ನಲ್ಲಿ ಗಿರಿಧಾಮಕ್ಕೆ ಕಾಲಿಟ್ಟರೆ ಮಳೆಯ ಸೊಬಗಿನ ಮಧ್ಯೆ ಕೆಂಪು ಹೂವಿನ ಕಣಿವೆಯ ಸೌಂದರ್ಯವನ್ನೂ ವೀಕ್ಷಿಸಬಹುದು ಎನ್ನುತ್ತಾರೆ’ ತೋಟಗಾರಿಕೆ ಇಲಾಖೆ ವಿಶೇಷ ಅಧಿಕಾರಿ ಯೋಗಾನಂದ.
‘ಸುಮಾರು 25 ವರ್ಷಗಳ ಹಿಂದೆ ಅಜೆಲಿಯಾ ಹೂವಿನ ಸಸ್ಯಗಳನ್ನು ತಂದು ಇಲ್ಲಿ ನೆಡಲಾಗಿತ್ತು. ಗಿರಿಧಾಮದ ‘ರಾಜಭವನ ಅತಿಥಿ ಗೃಹ’ದಿಂದ ಕೆಳಗಿನವರೆಗೆ ಅಂದರೆ ವಾಹನಗಳ ನಿಲುಗಡೆ ಪ್ರದೇಶದವರೆಗೆ ಇರುವ ಕಡಿದಾದ ಪ್ರದೇಶವನ್ನು ಮೆಟ್ಟಿಲು– ಮೆಟ್ಟಿಲಾಗಿ ನಿರ್ಮಿಸಿ, ಹೂವಿನ ಗಿಡಗಳನ್ನು ನೆಡಲಾಗುತ್ತಿದೆ. ಮೇಲ್ಭಾಗದಿಂದ ನೋಡಿದಾಗ ಹೂವಿನ ಕಣಿವೆಯಂತೆ ಭಾಸವಾಗುತ್ತದೆ’ ಎನ್ನುತ್ತಾರೆ ಅವರು.
ವರ್ಷದಲ್ಲಿ ಎರಡರಿಂದ– ಮೂರು ತಿಂಗಳು ಹೂವಿನ ಕಣಿವೆಯ ಸೌಂದರ್ಯವನ್ನು ವೀಕ್ಷಿಸಬಹುದು. ಗಿರಿಧಾಮದ ಕಣಿವೆ ಪ್ರದೇಶದಲ್ಲಿರುವ ಮರಗಳು ಮತ್ತು ಪರಿಸರವನ್ನು ಉಳಿಸಿಕೊಂಡು ಪುಷ್ಪ ಕಣಿವೆ ಸೃಷ್ಟಿಸುವುದು ಕಷ್ಟದ ಕೆಲಸ. ಈ ಎಲ್ಲ ಸಮತೋಲನವನ್ನು ಕಾಯ್ದು ಕೊಂಡಿದ್ದೇವೆ. ಈ ಹೂವಿಗೆ ಸೂರ್ಯನ ಬೆಳಕು ಬೀಳಬೇಕು. ಹೀಗಾಗಿ ಮರಗಳ ರೆಂಬೆಗಳನ್ನು ಟ್ರಿಮ್ ಮಾಡಿದ್ದೇವೆ. ಮೂರು– ನಾಲ್ಕು ವರ್ಷಗಳ ಬಳಿಕ ಇಲ್ಲಿನ ಸೌಂದರ್ವಯವೇ ವಿಭಿನ್ನವಾಗಿರುತ್ತದೆ ಎಂದು ಅವರು ಹೇಳಿದರು.
ಆದಾಯ ಹೆಚ್ಚಳಕ್ಕೆ ದಾರಿಗಳಿವೆ: ಕೆಮ್ಮಣ್ಣುಗುಂಡಿ ಆರ್ಥಿಕವಾಗಿ ಲಾಭದಾಯಕವಾಗಿಸಲು ಅವಕಾಶವಿದೆ. ಸತತ ನಾಲ್ಕು ವರ್ಷಗಳಿಂದ ಆದಾಯ ಏರಿಕೆಯಾಗಿದೆ. 2011 ರಲ್ಲಿ ವಾರ್ಷಿಕ ಸರಾಸರಿ ಆದಾಯ ₹25 ಲಕ್ಷದಿಂದ ₹30 ಲಕ್ಷ ಇತ್ತು. ಕಳೆದ ವರ್ಷ ₹ 90 ಲಕ್ಷಕ್ಕೆ ಏರಿಕೆಯಾಗಿದೆ ಎಂದರು.
ಕಳೆದ ವರ್ಷ ಭಾರಿ ಮಳೆ ಮತ್ತು ಭೂ ಕುಸಿತದ ಪರಿಣಾಮ ಕೆಮ್ಮಣ್ಣುಗುಂಡಿ ಗಿರಿಧಾಮದ ಮೇಲೂ ಆಗಿದೆ. ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿ ಆದಾಯವೂ ತಗ್ಗಿತ್ತು. ಪ್ರಚಾರ, ಸಾರಿಗೆ ವ್ಯವಸ್ಥೆ ಮತ್ತು ಅತಿಥಿ ಗೃಹಗಳ ಉತ್ತಮ ನಿರ್ವಹಣೆಯಿಂದ ಆದಾಯವನ್ನು ₹1 ಕೋಟಿ ದಾಟಿಸಲು ಸಾಧ್ಯ ಎಂದರು.
ಕಂಪನಿಗಳ ಕಾನ್ಫೆರೆನ್ಸ್: ಬೆಂಗಳೂರಿನಲ್ಲಿ ಅಸಂಖ್ಯಾತ ಕಾರ್ಪೊರೇಟ್ ಕಂಪನಿಗಳಿವೆ. ಅವು ತಮ್ಮ ಕಂಪನಿ ಸಭೆಗಳು ಅಥವಾ ವಿಚಾರಸಂಕಿರಣಗಳನ್ನು ಗಿರಿಧಾಮದಲ್ಲಿ ಮಾಡಬಹುದು. ಇದಕ್ಕಾಗಿ ಇಲ್ಲಿ ಒಂದು ಮಲ್ಟಿಮೀಡಿಯಾ ಹಾಲ್ ನಿರ್ಮಾಣ ಆಗಬೇಕು.ಕಂಪನಿಯ ಉದ್ಯೋಗಿಗಳಿಗೆ ಬೆಂಗಳೂರು ನಗರ ಜೀವನದ ಜಂಜಡದಿಂದ ಹೊರ ಬಂದು ಎರಡು ದಿನ ಉತ್ತಮ ಪರಿಸರದಲ್ಲಿ ಸಭೆಗಳನ್ನು ನಡೆಸಲು ಸಾಧ್ಯ. ಎಷ್ಟು ಜನ ಬಂದರೂ ಅವರಿಗೆಲ್ಲ ವ್ಯವಸ್ಥೆ ಮಾಡಲು ಸಾಧ್ಯವಿದೆ ಎಂದು ಯೋಗಾನಂದ ಅಭಿಪ್ರಾಯಪಟ್ಟರು.
ರಾಜ್ಯ ಕೀರ್ತಿ ತರಬಲ್ಲ ರೋಪ್‌ವೇ
ಕೆಮ್ಮಣ್ಣಗುಂಡಿಯಲ್ಲಿ ಮತ್ತೆ ರೋಪ್‌ವೇ ಆರಂಭಿಸಿದರೆ ವಿಶ್ವವಿಖ್ಯಾತ ಪ್ರವಾಸಿ ತಾಣವಾಗಲಿದೆ. ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದರು. ಇದಕ್ಕೆ ಕೆಮ್ಮಣ್ಣಗುಂಡಿಯಿಂದಲೇ ಅದಿರನ್ನು ಸಾಗಿಸಲಾಗುತ್ತಿತ್ತು. ಇದಕ್ಕಾಗಿ 1920 ರಲ್ಲಿ ಮಾನೊ ರೋಪ್‌ವೇ ಆರಂಭಿಸಲಾಯಿತು. 1950 ರಲ್ಲಿ ಅದನ್ನು ಬೈ ಕೇಬಲ್ ಆಗಿ ಮಾರ್ಪಡಿಸಲಾಯಿತು. 1985 ರವರೆಗೆ ಚಾಲನೆಯಲ್ಲಿತ್ತು. ಸರ್.ಎಂ.ವಿಶ್ವೇಶ್ವರಯ್ಯ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದ ಇದು ರೋಪ್‌ವೇ ಗುರುತ್ವಾಕರ್ಷಣೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಇದಕ್ಕೆ ವಿದ್ಯುತ್ ಬಳಕೆ ಆಗುತ್ತಿರಲಿಲ್ಲ. ಮತ್ತೆ ಚಾಲನೆ ನೀಡಬೇಕಾಗಿದೆ ಎನ್ನುತ್ತಾರೆ ಯೋಗಾನಂದ.
ಅತಿಥಿಗೃಹಗಳಿಗೆ ಒತ್ತು
‘ರಾಜಭವನ’ ಮತ್ತು ದತ್ತಾತ್ರೇಯ ಅತಿಥಿಗೃಹಗಳಿಗೆ ವಿಶೇಷ ಒತ್ತು ನೀಡಿ ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಇಲಿ, ಹಾವುಗಳ ಕಾಟ ಇಲ್ಲ. ಪ್ರವಾಸೋದ್ಯಮದ ಇಲಾಖೆ ಮಾಡಿದ ಕಾಮಗಾರಿ ಸಮಸ್ಯೆಯಿಂದ ಸೀಲಿಂಗ್ ಮತ್ತು ಮರದ ನೆಲಹಾಸು ಆಗ್ಗಾಗ್ಗೆ ಕಿತ್ತು ಹೋಗುತ್ತದೆ. ಅದರ ನಿರ್ವಹಣೆ ನಾವೇ ಮಾಡುತ್ತೇವೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಆದಾಯ
ಯಾವ ವರ್ಷ ಎಷ್ಟು ಆದಾಯ
2015–16 ₹74 ಲಕ್ಷ
2016–17 ₹85ಲಕ್ಷ
2017–18 ₹90 ಲಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.