ADVERTISEMENT

ಡಿಸಿಎಂ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿಲ್ಲ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 13:37 IST
Last Updated 29 ಜನವರಿ 2020, 13:37 IST
ಬಿ. ಶ್ರೀರಾಮುಲು
ಬಿ. ಶ್ರೀರಾಮುಲು   

ಹಾಸನ: ‘ನಾನು ಉಪಮುಖ್ಯಮಂತ್ರಿ ಆಗಬೇಕೆಂಬುದು ಜನರ ಬೇಡಿಕೆ. ಡಿಸಿಎಂ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

ಚನ್ನರಾಯಪಟ್ಟಣ ಹೆಲಿಪ್ಯಾಡ್‌ನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನನಗೆ ಡಿಸಿಎಂ ನೀಡುವ ಬಗ್ಗೆ ಮುಖ್ಯಮಂತ್ರಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ. ಎಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ. ಎರಡು, ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ. ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಹಳಬರು, ಹೊಸಬರು ಬದ್ಧರಾಗಿರುತ್ತಾರೆ’ ಎಂದರು.

ರಾಜ್ಯದಲ್ಲಿ ವೈದ್ಯರ ಕೊರತೆ ಇದೆ. ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಲೋಕಸೇವಾ ಆಯೋಗದ ಬದಲು ನೇರ ನೇಮಕಕ್ಕೆ ಅವಕಾಶ‌ ನೀಡಲಾಗಿದೆ. ಮುಂದಿನ ಮೂರು ತಿಂಗಳ ಒಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ADVERTISEMENT

ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಿ ಸಂಬಳ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವವರ ಅಗತ್ಯವಿಲ್ಲ. ಅವರಿಗೆ ಖಾಸಗಿ ಆಸ್ಪತ್ರೆ ಬೇಕಿದ್ದರೆ ಅಲ್ಲಿಗೆ ಹೋಗಬಹುದು ಎಂದು ಎಚ್ಚರಿಕೆ ನೀಡಿದರು.

ಚನ್ನರಾಯಪಟ್ಟಣದಲ್ಲಿ ಪೆಟ್ರೋಲ್‌ ಬಂಕ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇಬ್ಬರು ಸಚಿವರು, ಬೆಂಗಳೂರಿನಿಂದ ಪ್ರತ್ಯೇಕವಾಗಿ ಹೆಲಿಕಾಪ್ಟರ್‌ನಲ್ಲಿ ಬಂದರು.

ಗೆದ್ದವರಿಗೆ ಮಾತ್ರ ಸಚಿವ ಸ್ಥಾನ
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಚುನಾವಣೆಯಲ್ಲಿ ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ಸಿಗುವ ಅವಕಾಶಗಳಿವೆ ಎಂದು ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವಥ್ ನಾರಾಯಣ ಹೇಳಿದರು.

ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗೆ ಆತುರ ಇಲ್ಲ. ಎಚ್.ವಿಶ್ವನಾಥ್ ಅವರಿಗೆಮಂತ್ರಿ ಸ್ಥಾನ ನೀಡಬೇಕೆಂಬ ಒತ್ತಾಯ ಇದೆ. ಆದರೆ, ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ನೀಡಲು ಅವಕಾಶವಿದೆ. ಪಕ್ಷಕ್ಕೆ ಸಹಾಯ ಮಾಡಿರುವವರು ಮತ್ತು
ದುಡಿದಿರುವವರನ್ನು ಕೈ ಬಿಡುವುದಿಲ್ಲ. ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು. ಅದರಂತೆ ಆರ್.ಶಂಕರ್ ಅವರಿಗೂ ಒಳ್ಳೆಯದಾಗಲಿದೆ ಎಂದರು.

ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ನಕಲಿ ದಾಖಲೆಗಳ್ನು ನೀಡಿಲ್ಲ. ಅವರನ್ನು ಪೂರ್ಣಾವಧಿ ನಿರ್ದೇಶಕರಾಗಿ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.