ADVERTISEMENT

ಶಾಲೆ ಆರಂಭದ ಬಗ್ಗೆ ಶೀಘ್ರ ವರದಿ: ಸಚಿವ ಬಿ. ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 20:30 IST
Last Updated 6 ಅಕ್ಟೋಬರ್ 2020, 20:30 IST
ಬಿ. ಶ್ರೀರಾಮುಲು
ಬಿ. ಶ್ರೀರಾಮುಲು   

ಬೆಂಗಳೂರು: ‘ಶಾಲೆಗಳನ್ನು ಆರಂಭಿಸುವ ಕುರಿತು ಮಕ್ಕಳ ತಜ್ಞರ ಜತೆ ಸಮಾಲೋಚನೆ ನಡೆಸಿದ ಬಳಿಕ ವಿಸ್ಕೃತ ವರದಿ ಸಿದ್ಧಪಡಿಸಿ, ಶೀಘ್ರದಲ್ಲಿಯೇ ಶಿಕ್ಷಣ ಇಲಾಖೆಗೆ ನೀಡಲಾಗುವುದು’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

ಅಧಿಕಾರಿಗಳು, ವೈದ್ಯರು, ತಾಂತ್ರಿಕ ಪರಿಣತರು ಹಾಗೂ ಶಿಕ್ಷಣ ತಜ್ಞರ ಜತೆ ಮಂಗಳವಾರ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಇದೇ 15ರಿಂದ ಶಾಲಾ ಕಾಲೇಜು ತೆರೆಯಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡಿದೆ. ಹೀಗಾಗಿ, ‘ರಾಜ್ಯದಲ್ಲಿ ಎಲ್‌ಕೆಜಿ-ಯುಕೆಜಿ ಯಾವಾಗ ಆರಂಭಿಸಬಹುದು, ಆರಂಭಿಸುವುದಾದರೆ ಯಾವ ತರಗತಿಗಳನ್ನು ಮೊದಲು ಆರಂಭಿಸಬಹುದು, ಸಮುದಾಯ, ಜನಪ್ರತಿನಿಧಿಗಳಿಂದ ಯಾವ ರೀತಿಯಿಂದ ಸಹಕಾರ ನಿರೀಕ್ಷಿಸಬಹುದು ಎಂಬ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಸಲಹೆ ನೀಡುವಂತೆ ಶಿಕ್ಷಣ ಸಚಿವರು ಕೇಳಿದ್ದಾರೆ’ ಎಂದರು.

‘ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು 10 ಸಾವಿರ ಗಡಿ ದಾಟುತ್ತಿವೆ. ಇಂಥ ಸಂದರ್ಭದಲ್ಲಿ ಮಕ್ಕಳು ಹಾಗೂ ಪೋಷಕರು ತೊಂದರೆಗೆ ಒಳಗಾಗಬಾರದು ಎಂಬ ಕಾರಣಕ್ಕೆ ಶಾಲೆ ಆರಂಭಿಸಲು ನಿರ್ಧರಿಸಿಲ್ಲ’ ಎಂದು ಹೇಳಿದರು.

ADVERTISEMENT

‘ಎಲ್ಲಾ ಆಯಾಮಗಳನ್ನೂ ಗಮನಿಸಿ ಸಾಧಕ–ಬಾಧಕಗಳನ್ನು ಚರ್ಚಿಸಿದ್ದೇವೆ. ಮೊದಲು ಪೋಷಕರು ಮತ್ತು ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ಬಂದ ಬಳಿಕ ಶಾಲಾ-ಕಾಲೇಜು ತೆರೆಯುವಂತೆ ಕೆಲವು ತಜ್ಞರು ಸಲಹೆ ನೀಡಿದ್ದಾರೆ’ ಎಂದರು.

ಮುಂಜಾಗ್ರತಾ ಕ್ರಮ: ‘ಜೂನ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ತೆಗೆದುಕೊಂಡಿದ್ದ ಮುನ್ನೆಚ್ಚರಿಕೆ ಕ್ರಮಗಳನ್ನೇ ಶಾಲೆ ಆರಂಭಿಸುವ ಸಂದರ್ಭದಲ್ಲೂ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸಲಹೆ ನೀಡಿದ್ದಾರೆ. ಪರೀಕ್ಷೆ ವೇಳೆ ಜಾರಿಯಲ್ಲಿದ್ದ ಪ್ರಮಾಣಿತ ಕಾರ್ಯಸೂಚಿ ವಿಧಾನವನ್ನು (ಎಸ್‌ಒಪಿ) ಪರಿಷ್ಕರಿಸಿ ಶಿಕ್ಷಣ ಇಲಾಖೆಗೆ ನೀಡಲಾಗುವುದು’ ಎಂದೂ ಶ್ರೀರಾಮುಲು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.