ADVERTISEMENT

ಬಾಬು ಜಗಜೀವನರಾಂ ಪುತ್ಥಳಿ ಧ್ವಂಸ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST
ನಂಜನಗೂಡು ತಾಲ್ಲೂಕಿನ ಹುಳಿಮಾವು ಗ್ರಾಮದಲ್ಲಿ ಬಾಬು ಜಗಜೀವನರಾಂ ಪುತ್ಥಳಿಗೆ ಹಾನಿ ಮಾಡಲಾಗಿದೆ
ನಂಜನಗೂಡು ತಾಲ್ಲೂಕಿನ ಹುಳಿಮಾವು ಗ್ರಾಮದಲ್ಲಿ ಬಾಬು ಜಗಜೀವನರಾಂ ಪುತ್ಥಳಿಗೆ ಹಾನಿ ಮಾಡಲಾಗಿದೆ   

ನಂಜನಗೂಡು: ತಾಲ್ಲೂಕಿನ ಹುಳಿಮಾವು ಗ್ರಾಮದ ಮುಖ್ಯ ದ್ವಾರದ ಬಳಿ ಇದ್ದ ಬಾಬು ಜಗಜೀವನರಾಂ ಪುತ್ಥಳಿಯನ್ನು ಬುಧವಾರ ರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಎರಡು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಪುತ್ಥಳಿಯ ಕುತ್ತಿಗೆ ಭಾಗವನ್ನು ಕತ್ತರಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಗುರುವಾರ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

10 ವರ್ಷಗಳ ಹಿಂದೆಯೂ ಗ್ರಾಮದಲ್ಲಿದ್ದ ಬಾಬು ಜಗಜೀವನರಾಂ ಪ್ರತಿಮೆಗೆ ಚಪ್ಪಲಿ ಹಾರ ಹಾಕಲಾಗಿತ್ತು. ಕಳೆದ ಮೂರು ವರ್ಷಗಳ ಹಿಂದೆಯೂ ಕೋಮುಗಲಭೆ ಸಂಭವಿಸಿತ್ತು. ಈ ಪ್ರಕರಣಗಳ ಆರೋಪಿಗಳನ್ನು ಬಂಧಿಸದೆ ಇರುವುದರಿಂದ ಮತ್ತೆ ಇಂತಹ ಘಟನೆ ಮರುಕಳಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಉಪವಿಭಾಗಾಧಿಕಾರಿ ರಾಜು, ತಹಶೀಲ್ದಾರ್ ದಯಾನಂದ್, ಡಿವೈಎಸ್‌ಪಿ ಅರುಣಾಂಶುಗಿರಿ ಭೇಟಿ ನೀಡಿ, 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಸ್ಥಗಿತಗೊಳಿಸಿದರು. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಧಾವಿಸಿ ಪರಿಶೀಲನೆ ನಡೆಸಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಪ್ರತ್ಯೇಕ ತಂಡ ರಚಿಸಿದ್ದಾರೆ. ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.