ADVERTISEMENT

ಜಲಸಂಪನ್ಮೂಲ: ನಕಲಿ ಅಭ್ಯರ್ಥಿಗಳ ಮೇಲುಗೈ?

182 ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಭರ್ತಿಗೆ ನೇರ ನೇಮಕಾತಿ

ಚಂದ್ರಹಾಸ ಹಿರೇಮಳಲಿ
Published 12 ಡಿಸೆಂಬರ್ 2022, 20:06 IST
Last Updated 12 ಡಿಸೆಂಬರ್ 2022, 20:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇದ್ದ 182 ಬ್ಯಾಕ್‌ಲಾಗ್‌ ಹುದ್ದೆಗಳಿಗೆ ನಡೆಯುತ್ತಿರುವ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ದಾಖಲಾತಿ ಪರಿಶೀಲನೆಗೆ ಸಿದ್ಧಪಡಿಸಿದ 1:2 ಪಟ್ಟಿಯಲ್ಲೇ ಶೇ 50ಕ್ಕಿಂತ ಹೆಚ್ಚು ಪುನರಾವರ್ತಿತ, ನಕಲಿ ಅಭ್ಯರ್ಥಿಗಳೇ ಇದ್ದಾರೆ ಎಂದು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ದೂರಿದ್ದಾರೆ.

ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಉಳಿದಿದ್ದಗ್ರೂಪ್‌–ಸಿ ವೃಂದದ ದ್ವಿತೀಯ ದರ್ಜೆ ಸಹಾಯಕರ ಪರಿಶಿಷ್ಟ ಜಾತಿ ಬ್ಯಾಕ್‌ಲಾಗ್‌ನ ಹುದ್ದೆಗಳ ನೇಮಕಾತಿಗೆ ಇದೇ ವರ್ಷದ ಸೆ.23ರಂದು ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಎಂಜಿನಿಯರ್‌ ಅಧಿಸೂಚನೆ ಹೊರಡಿಸಿದ್ದರು. ದ್ವಿತೀಯ ಪಿಯುಸಿ, ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಅಥವಾತತ್ಸಮಾನ ಕೋರ್ಸ್‌ಗಳನ್ನು ಪೂರೈಸಿದ, 18ರಿಂದ 40 ವರ್ಷದ ವಯೋಮಿತಿಯ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು 28 ದಿನಗಳ ಕಾಲಾವಕಾಶ ನೀಡಲಾಗಿದೆ.

182 ಹುದ್ದೆಗಳಿಗೆ ಆಯ್ಕೆ ಬಯಸಿ 20 ಸಾವಿಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸಲ್ಲಿಕೆಯಾದ ಅರ್ಜಿಗಳಲ್ಲಿ ಗರಿಷ್ಠ ಅಂಕ ಪಡೆದ 364 ಅಭ್ಯರ್ಥಿಗಳಿಗೆ 1:2 ಆಧಾರದಲ್ಲಿ ದಾಖಲೆಗಳ ಪರಿಶೀಲನೆಗೆ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಹಾಕಿದ ಬಹುತೇಕರು ಗಳಿಸಿದ ಅಂಕ ಶೇ 100 ಎಂದು ನಮೂದಿಸಿದ್ದಾರೆ. ನಮೂದಿಸಿದ ಅಂಕಗಳ ಆಧಾರದಲ್ಲಿಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗಿದೆ. ಉಳಿದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೇ 1:2 ಆಧಾರದಲ್ಲಿ ದಾಖಲಾತಿ ಪರಿಶೀಲನೆಗೆ ಕರೆಯಲಾಗಿದೆ. ಹಾಗಾಗಿ, ಇತರೆ ಪ್ರತಿಭಾವಂತ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಲು ಅವಕಾಶ ದೊರೆತಿಲ್ಲ ಎನ್ನುವುದು ಉದ್ಯೋಗಾಕಾಂಕ್ಷಿಗಳ ಆರೋಪ.

ADVERTISEMENT

ಬಹುತೇಕರು ಪಿಯುಸಿ ಅಥವಾ ತತ್ಸಮಾನ ಕೋರ್ಸ್‌ಗಳಲ್ಲಿ ಶೇ 100ರಷ್ಟು ಅಂಕ ಪಡೆದಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇಂತಹ ಒಬ್ಬೊಬ್ಬ ಅಭ್ಯರ್ಥಿಯ ಹೆಸರಿನಲ್ಲಿ 10ರಿಂದ 20 ಅರ್ಜಿಗಳು ಸಲ್ಲಿಕೆಯಾಗಿವೆ. ಅವರೆಲ್ಲರ ಪುನರಾವರ್ತಿತ ಹೆಸರುಗಳೂ ದಾಖ ಲಾತಿ ಪರಿಶೀಲನೆಯ ಪಟ್ಟಿಯಲ್ಲಿವೆ.

ಅರ್ಜಿ ಭರ್ತಿಯಲ್ಲೂ ಉಡಾಫೆ: ದಾಖಲಾತಿ ಪರಿಶೀಲನಾ ಪಟ್ಟಿಯಲ್ಲಿರುವ ಹಲವರು ಅರ್ಜಿ ಭರ್ತಿಮಾಡುವಾಗ ವಿಚಿತ್ರ ಮಾಹಿತಿ ನೀಡಿದ್ದಾರೆ. ಶೇ 99.67 ಅಂಕ ಪಡೆದಿರುವ ಕಲಬುರಗಿಯ ಅಭ್ಯರ್ಥಿ ತನ್ನ ಹೆಸರು ಅಣ್ಣಾ ಎಂದು, ತಾಯಿ ಹೆಸರು ಅಮ್ಮ, ತಂದೆಯ ಹೆಸರು ಅಪ್ಪ ಎಂದು ನಮೂದಿಸಿದ್ದಾರೆ. ಐಟಿಐನಲ್ಲಿ ಅವರು ಪಡೆದ ಅಂಕಗಳು 600ಕ್ಕೆ 595 ಎಂದಿದೆ. ಅವರ ಹೆಸರೇ ಪಟ್ಟಿಯಲ್ಲಿ 10ಕ್ಕೂ ಹೆಚ್ಚು ಬಾರಿ ಇದೆ.

ವಿಜಯಪುರದ ಮತ್ತೊಬ್ಬ ಅಭ್ಯರ್ಥಿ ಜಾತಿಯ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಿದ್ದಾರೆ. ಅಂಕಗಳು ಶೇ 100 ಇದೆ. ರಾಯಚೂರಿನ ಅಭ್ಯರ್ಥಿಯೊಬ್ಬರ ಹೆಸರು ಪಟ್ಟಿಯಲ್ಲಿ ಆರು ಕಡೆ ಇದೆ. ಮತ್ತೊಬ್ಬ ಅಭ್ಯರ್ಥಿ ಪಿಯುಸಿ ಉತ್ತೀರ್ಣ ದಿನಾಂಕವನ್ನು 2030 ಎಂದು ನಮೂದಿಸಿದ್ದಾರೆ. ಕೆಲ ವೀರಶೈವ ಲಿಂಗಾಯತರು ಬೇಡ ಜಂಗಮ ಪ್ರಮಾಣಪತ್ರದ ಮೂಲಕ ಬ್ಯಾಕ್‌ಲಾಗ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

‘ಬಹುತೇಕರು ನಕಲಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಹಲವರ ಹೆಸರು ಪುನರಾವರ್ತಿತವಾಗಿವೆ. ಅಂತಹ ಅರ್ಜಿಗಳೆಲ್ಲ ಮೊದಲೇ ವಜಾ ಮಾಡಿದ್ದರೆ 1:2 ಕೋಟಾದಲ್ಲಿ ಇನ್ನಷ್ಟು ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಯ ಅವಕಾಶ ದೊರಕುತ್ತಿತ್ತು’ ಎನ್ನುತ್ತಾರೆ ಜಗಳೂರು ತಾಲ್ಲೂಕಿನ ಅಭ್ಯರ್ಥಿ ಎಸ್‌.ಎನ್‌.ನಾಯಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.