ADVERTISEMENT

2ಎಗೆ ಬಲಿಷ್ಠರ ಸೇರ್ಪಡೆಗೆ ವಿರೋಧ; ಹಿಂದುಳಿದ ಜಾತಿಗಳ ಒಕ್ಕೂಟದಿಂದ ಆಯೋಗಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 19:30 IST
Last Updated 1 ಮಾರ್ಚ್ 2021, 19:30 IST
ರಾಜ್ಯ ಹಿಂದುಳಿದ ಜಾತಿಗಳ ಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ನೇತೃತ್ವದ ನಿಯೋಗ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಮವಾರ ಭೇಟಿಮಾಡಿ, ಮೀಸಲಾತಿ ಬೇಡಿಕೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿತು
ರಾಜ್ಯ ಹಿಂದುಳಿದ ಜಾತಿಗಳ ಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ನೇತೃತ್ವದ ನಿಯೋಗ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಮವಾರ ಭೇಟಿಮಾಡಿ, ಮೀಸಲಾತಿ ಬೇಡಿಕೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿತು   

ಬೆಂಗಳೂರು: ಹಿಂದುಳಿದಿರುವಿಕೆಯ ಕುರಿತು ವೈಜ್ಞಾನಿಕವಾದ ವರದಿಗಳ ಆಧಾರವಿಲ್ಲದೆ ಯಾವುದೇ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಪಟ್ಟಿಗೆ ಸೇರಿಸಬಾರದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಅವರಿಗೆ ಮನವಿಸಲ್ಲಿಸಿದೆ.

ಸೋಮವಾರ ಆಯೋಗದ ಅಧ್ಯಕ್ಷರನ್ನು ಭೇಟಿಮಾಡಿದ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್‌. ವೆಂಕಟರಾಮಯ್ಯ ನೇತೃತ್ವದ ನಿಯೋಗ, ‘ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಪಟ್ಟಿಗೆ ಸೇರಿಸುವಂತೆ ಕೆಲವು ಪ್ರಬಲ ಸಮುದಾಯಗಳು ಇಟ್ಟಿರುವ ಬೇಡಿಕೆಯನ್ನು ಅಧ್ಯಯನ ವರದಿಗಳ ಆಧಾರವಿಲ್ಲದೆ ಒಪ್ಪಿಕೊಳ್ಳಬಾರದು’ ಎಂಬ ಆಕ್ಷೇಪಣೆ
ದಾಖಲಿಸಿತು.

ಪ್ರವರ್ಗ ‘3ಎ’ ಮತ್ತು ‘3ಬಿ’ ಪಟ್ಟಿಯಲ್ಲಿರುವ ಕೆಲವು ಪ್ರಬಲ ಸಮುದಾಯಗಳು ಪ್ರವರ್ಗ ‘2ಎ’ ಅಡಿಯಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿವೆ. ಪ್ರವರ್ಗ ‘2ಎ’ಗೆ ಈಗ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡ 15ರಷ್ಟು ಮೀಸಲಾತಿ ಇದೆ. ಈ ಪ್ರಮಾಣವು ಜನಸಂಖ್ಯೆಗೆ ಅನುಗುಣವಾಗಿ ನಿಗದಿಯಾದದ್ದಲ್ಲ. ‘2ಎ’ ಪಟ್ಟಿಯಲ್ಲಿರುವ 102 ಸಮುದಾಯಗಳಿಗೇ ಶೇ 15ರಷ್ಟು ಮೀಸಲಾತಿಯಿಂದ ನ್ಯಾಯ ದೊರಕು
ತ್ತಿಲ್ಲ ಎಂದು ಒಕ್ಕೂಟ ಮನವಿಯಲ್ಲಿ ಹೇಳಿದೆ.

ADVERTISEMENT

‘ಪ್ರಬಲ ಸಮುದಾಯಗಳು ‘2ಎ’ ಮೀಸಲಾತಿಗಾಗಿ ಸರ್ಕಾರದ ಮೇಲೆ ಒತ್ತಡ ತರುತ್ತಿವೆ. ಸರ್ಕಾರ ಕೂಡ ಅವರ ಬೇಡಿಕೆ ಈಡೇರಿಸುವ ಆಶ್ವಾಸನೆ ನೀಡುತ್ತಿದೆ. ಹಿಂದುಳಿದ ವರ್ಗಗಳ ಕಾಯ್ದೆ–1995ರ ಪ್ರಕಾರ ಪ್ರಕ್ರಿಯೆ ನಡೆಸದೇ ಬಲಿಷ್ಠ ಜಾತಿಯನ್ನು ‘2ಎ’ ಪಟ್ಟಿಗೆ ಸೇರಿಸುವುದು ಸಾಮಾಜಿಕ ನ್ಯಾಯ ಮತ್ತು ದೇಶದ ಸಂವಿಧಾನಕ್ಕೆ ಮಾಡುವ ಅಪಚಾರ’ ಎಂದು ಒಕ್ಕೂಟ ಆಕ್ಷೇಪಿಸಿದೆ.

ಯಾವುದೇ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿತಿಗತಿಗಳು ಹಾಗೂ ಅವರ ಹಿಂದುಳಿದಿರುವಿಕೆಯ ಕುರಿತು ವೈಜ್ಞಾನಿಕ ಅಧ್ಯಯನ ವರದಿ ಪಡೆದ ಬಳಿಕವೇ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿದೆ. ವೈಜ್ಞಾನಿಕ ಆಧಾರವಿಲ್ಲದೇ ಮೀಸಲಾತಿ ಪಟ್ಟಿಗೆ ಸೇರಿಸುವುದರಿಂದ ಸಾಮಾಜಿಕ ನ್ಯಾಯದಲ್ಲಿ ಅಸಮತೋಲನ ಉಂಟಾಗುವ ಅಪಾಯವಿದೆ ಎಂದು ಆತಂಕ
ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.