ಸುಬ್ಬಾರೆಡ್ಡಿ
ನವದೆಹಲಿ: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಕಾಂಗ್ರೆಸ್‌ನ ಎಸ್.ಎನ್. ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸುಬ್ಬಾ ರೆಡ್ಡಿ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಪೀಠವು ಶುಕ್ರವಾರ ನಡೆಸಲಿದೆ.
‘ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ನನ್ನನ್ನೇ ವಿಜೇತ ಅಭ್ಯರ್ಥಿ ಎಂದು ಘೋಷಿಸಬೇಕು’ ಎಂದು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಭಾಗಶಃ ಪುರಸ್ಕರಿಸಿ ಫೆಬ್ರುವರಿ 16ರಂದು ಆದೇಶ ಹೊರಡಿಸಿತ್ತು.
2023ರ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಸ್.ಎನ್.ಸುಬ್ಬಾರೆಡ್ಡಿ 82,128 ಮತಗಳನ್ನು ಪಡೆದು ಜಯಗಳಿಸಿದ್ದರು. ಸಿ.ಮುನಿರಾಜು 62,949 ಮತ ಪಡೆದು ಸೋಲುಂಡಿದ್ದರು. ಸುಬ್ಬಾರೆಡ್ಡಿ ಆಯ್ಕೆ ಪ್ರಶ್ನಿಸಿ ಸಿ.ಮುನಿರಾಜು 2023ರ ಜೂನ್ 24ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
‘ಸುಬ್ಬಾರೆಡ್ಡಿ 2023ರ ಏಪ್ರಿಲ್ 20ರಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವಾಗ ಯಾವುದೇ ಉಮೇದುವಾರ ತನ್ನ ಪತ್ನಿ ಮತ್ತು ಅವಲಂಬಿತರಿಗೆ ಸೇರಿದ ಆಸ್ತಿಗಳು, ಹೊಣೆಗಾರಿಕೆಗಳ ವಿವರಗಳ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಬಾಂಡ್, ಶೇರ್‌ಗಳಲ್ಲಿನ ಹೂಡಿಕೆ, ಸಾಲಪತ್ರಗಳು, ಕಂಪನಿಗಳ ವಿವರ, ಮ್ಯೂಚುವಲ್ ಫಂಡ್, ವೈಯಕ್ತಿಕ ಸಾಲ ಸೇರಿದಂತೆ ಎಲ್ಲಾ ರೀತಿಯ ಹಣಕಾಸು ವಹಿವಾಟುಗಳ ಪಾರದರ್ಶಕ ಮಾಹಿತಿ ಒದಗಿಸಬೇಕು. ಆದರೆ, ಸುಬ್ಬಾರೆಡ್ಡಿ ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಮಗೆ ಸೇರಿದ ಸಂಪತ್ತು, ಸಾಲಗಳು, ಹೊಣೆಗಾರಿಕೆ, ಹೂಡಿಕೆ ಸೇರಿದಂತೆ ಅನೇಕ ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ’ ಎಂದು ಆಕ್ಷೇಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.