ADVERTISEMENT

ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ಆರೋಪಿಗಳಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 15:56 IST
Last Updated 13 ಜನವರಿ 2025, 15:56 IST
<div class="paragraphs"><p>ಜಾಮೀನು</p></div>

ಜಾಮೀನು

   

ಬೆಂಗಳೂರು: ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಧಾರವಾಡ ಜಿಲ್ಲಾ ನ್ಯಾಯಾಲಯ ಇತ್ತೀಚೆಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ಪ್ರಕರಣದ ಒಂದನೇ ಆರೋಪಿ ಪುಣೆಯ ಚಿಂಚವಾಡಾದ ಅಮೋಲ್‌ ಎ.ಕಾಳೆ, ಎರಡನೇ ಆರೋಪಿಯಾದ ಹುಬ್ಬಳ್ಳಿಯ ಗಣೇಶ್‌ ಮಿಸ್ಕಿನ್‌ ಮತ್ತು ಐದನೇ ಆರೋಪಿ ಮಹಾರಾಷ್ಟ್ರದ ಸಂಭಾಜಿ ನಗರದ (ಔರಂಗಾಬಾದ್‌) ಶರದ್‌ ಕಲಾಸ್ಕರ್‌ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶೆ ಪೂರ್ಣಿಮಾ ಎನ್.ಪೈ ಪುರಸ್ಕರಿಸಿದ್ದಾರೆ.

ADVERTISEMENT

‘ಪ್ರಕರಣದ ಮೂರನೇ ಆರೋಪಿ ಪ್ರವೀಣ್‌, ನಾಲ್ಕನೇ ಆರೋಪಿ ವಾಸುದೇವ್‌ ಸೂರ್ಯವಂಶಿ, ಆರನೇ ಆರೋಪಿ ಅಮಿತ್‌ ಬಡ್ಡಿ ಅವರಿಗೆ ಹೈಕೋರ್ಟ್‌ ಈಗಾಗಲೇ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ವಿಚಾರಣೆ ಶೀಘ್ರದಲ್ಲೇ ಮುಗಿಯುವ ಸಾಧ್ಯತೆಯೂ ಕಾಣುತ್ತಿಲ್ಲ. ಅರ್ಜಿದಾರರು ಜಾಮೀನು ಪಡೆಯಲು ಸೂಕ್ತ ಕಾರಣಗಳನ್ನು ನೀಡಿದ್ದಾರೆ’ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ವಿವರಿಸಿದೆ.

ಧಾರವಾಡದ ಕಲ್ಯಾಣನಗರದಲ್ಲಿ 2015ರ ಆಗಸ್ಟ್‌ 30ರಂದು ಬೆಳಿಗ್ಗೆ ಶರದ್‌ ಕಲಾಸ್ಕರ್‌ ಜೊತೆ ಬೈಕಿನಲ್ಲಿ ಬಂದಿದ್ದ ಗಣೇಶ್‌ ಮಿಸ್ಕಿನ್‌, ಕಲಬುರ್ಗಿ ಅವರಿಗೆ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದರು’ ಎಂದು ಆರೋಪಿಸಿ ಕಲಬುರ್ಗಿ ಅವರ ಪುತ್ರಿ ರೂಪದರ್ಶಿ ನೀಡಿದ ದೂರಿನ ಮೇರೆಗೆ ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.