ADVERTISEMENT

ಕೆಎಂಎಫ್‌ಗೆ ಬಾಲಚಂದ್ರ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 19:53 IST
Last Updated 31 ಆಗಸ್ಟ್ 2019, 19:53 IST
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ   

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ಅಧ್ಯಕ್ಷರಾಗಿ ಅರಭಾವಿಯ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಶನಿವಾರ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 16 ನಿರ್ದೇಶಕರ ಪೈಕಿ 13 ಮಂದಿ ಬಾಲಚಂದ್ರ ಜಾರಕಿಹೊಳಿ ಪರ ಇದ್ದರು. ಶನಿವಾರ ನಿಗದಿತ ಅವಧಿಯೊಳಗೆಬಾಲಚಂದ್ರ ಜಾರಕಿಹೊಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್‌ ಪ್ರಕಟಿಸಿದರು.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕ ಎಚ್‌.ಡಿ.ರೇವಣ್ಣ ಅವರಿಗೆ ಅನುಮೋದಕರೇ ಇಲ್ಲವಾದ ಕಾರಣ ಅವರು ನಾಮಪತ್ರವನ್ನೇ ಸಲ್ಲಿಸಲಿಲ್ಲ. ಇನ್ನೊಬ್ಬ ಆಕಾಂಕ್ಷಿ ಹಗರಿಬೊಮ್ಮನಹಳ್ಳಿಯ ಕಾಂಗ್ರೆಸ್‌ ಶಾಸಕ ಭೀಮಾ ನಾಯ್ಕ್‌ ಅವರು ಏಕಾಂಗಿಯಾಗಿದ್ದರು. ಶಾಸಕ ಬಂಡೆಪ್ಪ ಕಾಶೆಂಪುರ ಅವರ ಸಹೋದರ ಮಾರುತಿ ಕಾಶೆಂಪುರ ಅವರು ಬಾಲಚಂದ್ರ ಜಾರಕಿಹೊಳಿ ಗುಂಪಿನಿಂದ ಹೊರಗಿದ್ದ ಮೂರನೇ ನಿರ್ದೇಶಕರು. ಆಯ್ಕೆಗೆ ಅವಕಾಶ ಇಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಮೂವರೂ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೆಂಬಲ ಸೂಚಿಸಿದರು.

ADVERTISEMENT

‘ನಮ್ಮಿಂದ ತೊಂದರೆ ಆಗಬಾರದು’
ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದಿಂದ ಹಾಲು ಉತ್ಪಾದಕರಿಗೆ ತೊಂದರೆ ಆಗಬಾರದೆಂದು ಕೆಎಂಎಫ್‌ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ದೂರ ಉಳಿಯಬೇಕಾಯಿತು ಎಂದು ಶಾಸಕ ಎಚ್.ಡಿ.ರೇವಣ್ಣ ಹಾಸನದಲ್ಲಿ ಹೇಳಿದರು.

‘ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಹಕಾರ ನೀಡಲಾಗುವುದು. ಹಿಂದೆ ನಮ್ಮದೇ ಪಕ್ಷದಲ್ಲಿ ಇದ್ದವರು. ನಾಯಕ ಸಮಾಜಕ್ಕೂ ಅವಕಾಶ ಸಿಗಬೇಕು ಎಂಬುದು ನಮ್ಮ ಉದ್ದೇಶ’ ಎಂದರು.

*
ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಕೆಎಂಎಫ್‌ ಸಂಸ್ಥೆ ರೈತಪರವಾದ ಯೋಜನೆಗಳನ್ನು ಜಾರಿಗೆ ತಂದು ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡುತ್ತದೆ ಎಂದು ನಂಬಿದ್ದೇನೆ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.