ADVERTISEMENT

ಬಳ್ಳಾರಿ ಘರ್ಷಣೆ: ಸದನದಲ್ಲಿ ಜನಾರ್ದನ ರೆಡ್ಡಿ–ನಾಗೇಂದ್ರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 15:32 IST
Last Updated 30 ಜನವರಿ 2026, 15:32 IST
   

ಬೆಂಗಳೂರು: ಬಳ್ಳಾರಿಯ ಅವ್ವಂಬಾವಿಯಲ್ಲಿ ಇದೇ ತಿಂಗಳ ಆರಂಭದಲ್ಲಿ ನಡೆದಿದ್ದ ಘರ್ಷಣೆ, ಸಾವು ಪ್ರಕರಣ ಕುರಿತ ಚರ್ಚೆ ಕಾಂಗ್ರೆಸ್‌ನ ಬಿ.ನಾಗೇಂದ್ರ ಹಾಗೂ ಬಿಜೆಪಿ ಸಹ ಸದಸ್ಯ ಜಿ. ಜನಾರ್ದನ ರೆಡ್ಡಿ ನಡುವೆ ವಾಗ್ವಾದಕ್ಕೆ ತಿರುಗಿತು. 

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಮಾತನಾಡಿದ ನಾಗೇಂದ್ರ, ಬಳ್ಳಾರಿಯಲ್ಲಿ ಜ.17ರಂದು ನಡೆದ ಬಿಜೆಪಿ ಪ್ರತಿಭಟನಾ ಸಮಾವೇಶದಲ್ಲಿ ಶ್ರೀರಾಮುಲು ಕಾಂಗ್ರೆಸ್‌ ಶಾಸಕ, ಕಾರ್ಯಕರ್ತರನ್ನು ನಾಶ ಮಾಡುವ ಮಾತನಾಡಿದ್ದಾರೆ. ‘ಅಧಿಕಾರ ಇದೆ ಎಂದು ಪೊಲೀಸರು ಈಗ ಭರತ್‌ ರೆಡ್ಡಿಯನ್ನು ರಕ್ಷಿಸಿರಬಹುದು. ಮುಂದೆ ನಮಗೆ ಅಧಿಕಾರ ಸಿಗುತ್ತದೆ. ಆಗ ಪಾತಾಳದಲ್ಲಿದ್ದರೂ ಭರತ್ ರೆಡ್ಡಿಯನ್ನು ಬಿಡುವುದಿಲ್ಲ. 2028ಕ್ಕೆ ನಾವು ಗೆಲ್ಲುವುದು ಶತಃಸಿದ್ಧ. ಆಗ ನಿನ್ನ ರಕ್ಷಣೆಗೆ ಯಾರು ಬರುತ್ತಾರೆ ನೋಡೋಣ’ ಎಂದು ಸವಾಲು ಎಸೆದಿದ್ದಾರೆ. ಬಿಜೆಪಿ ನಾಯಕರ ವರ್ತನೆ ಬಳ್ಳಾರಿಯ ಶಾಂತಿ ಸುವ್ಯವಸ್ಥೆಗೆ ಮಾರಕ’ ಎಂದು ಟೀಕಿಸಿದರು.

‘ಜನಾರ್ದನ ರೆಡ್ಡಿ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರ ವಿರುದ್ಧ ಸಲ್ಲದ ಟೀಕೆ ಮಾಡಿದ್ದಾರೆ. ಪ್ರಕರಣವನ್ನು ಸರ್ಕಾರ ಉತ್ತಮವಾಗಿ ನಿಭಾಯಿಸಿದೆ. ತನಿಖೆ ನಡೆಯುತ್ತಿದೆ. ಮಹರ್ಷಿ ವಾಲ್ಮೀಕಿ ಅವರ ಬ್ಯಾನರ್‌ ಹರಿದುಹಾಕಿದ್ದಲ್ಲದೆ, ಭಾವಚಿತ್ರವನ್ನು ಕಾಲಿನಿಂದ ತುಳಿದಿದ್ದಾರೆ. ಘರ್ಷಣೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ಪ್ರಾಣ ಕಳೆದುಕೊಂಡಿದ್ದಾನೆ. ಜನಾರ್ದನ ರೆಡ್ಡಿ ನೂರು ಸುಳ್ಳು ಹೇಳಿ ಸತ್ಯವೆಂದು ನಂಬಿಸುತ್ತಿದ್ದಾರೆ. ಸರ್ಕಾರವನ್ನು ಸಮರ್ಥಿಸಿಕೊಳ್ಳುವುದು ನಮ್ಮ ಕೆಲಸ. ಮತ್ತೆ ಬಳ್ಳಾರಿ ರಿಪಬ್ಲಿಕ್‌ ಮಾಡಲು ಹೊರಟ ಅವರ ಪ್ರಯತ್ನ ತಡೆಯುವ ಶಕ್ತಿ ಕಾಂಗ್ರೆಸ್‌ಗೆ ಇದೆ. ಅವರ ಸವಾಲು ಸ್ವೀಕರಿಸುತ್ತೇವೆ’ ಎಂದರು.

ADVERTISEMENT

ಅವರ ಮಾತಿಗೆ ಕೆರಳಿದ ಜನಾರ್ದನ ರೆಡ್ಡಿ, ‘ಘಟನೆಯ ಎಲ್ಲ ವಿಡಿಯೊ ನನ್ನ ಬಳಿ ಇವೆ. ಶಾಸಕ ಭರತ್‌ ರೆಡ್ಡಿ ಬೆಂಬಲಿಗರ ವರ್ತನೆ, ಅವರ ಗನ್‌ಮ್ಯಾನ್‌ಗಳ ಕೃತ್ಯ, ಕೆಲ ಪೊಲೀಸರ ವರ್ತನೆ ಖಂಡಿಸಿದ್ದೇವೆ. ಆರೋಪಿ ಭರತ್‌ ಬಂಧನಕ್ಕೆ ಆಗ್ರಹಿಸಿದ್ದೇವೆ. ಸತ್ಯವನ್ನು ಹೇಳಿದರೆ ಕಾಂಗ್ರೆಸ್‌ ನಾಯಕರು, ಸರ್ಕಾರ ಸಹಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನಾಗೇಂದ್ರ ಬೆಂಬಲಕ್ಕೆ ಕಾಂಗ್ರೆಸ್‌ ಸದಸ್ಯರು, ರೆಡ್ಡಿ ಬೆಂಬಲಕ್ಕೆ ಬಿಜೆಪಿ–ಜೆಡಿಎಸ್‌ ಸದಸ್ಯರು ನಿಂತರು. ಕೊನೆಗೆ ಸಭಾಧ್ಯಕ್ಷ ಯು.ಟಿ.ಖಾದರ್‌ ವಿಷಯಾಂತರದ ಮೂಲಕ ಗದ್ದಲ ಶಮನಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.