ADVERTISEMENT

ಬೆಂಗಳೂರು | ‘ಮತಪತ್ರ’ ಕಡ್ಡಾಯ: 4 ಮಸೂದೆ ಸಿದ್ಧ

ಸಂಪುಟ ಸಭೆಯ ಅನುಮೋದನೆ ಪಡೆದು ಸುಗ್ರೀವಾಜ್ಞೆ ಹೊರಡಿಸಲು ತಯಾರಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 15:51 IST
Last Updated 8 ಸೆಪ್ಟೆಂಬರ್ 2025, 15:51 IST
   

ಬೆಂಗಳೂರು: ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬದಲು, ರಹಸ್ಯ ಮತದಾನ ವ್ಯವಸ್ಥೆಗೆ ‘ಮತಪತ್ರ’ (ಬ್ಯಾಲಟ್ ಪೇಪರ್) ಬಳಕೆ ಕಡ್ಡಾಯಗೊಳಿಸಲು ಸಂಬಂಧಪಟ್ಟ ಕಾಯ್ದೆಗಳ ತಿದ್ದುಪಡಿಗೆ ನಾಲ್ಕು ಮಸೂದೆಗಳನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ.

ಇದೇ 11ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಸೂದೆಗಳ ಕರಡನ್ನು ಮಂಡನೆ ಮಾಡಲಾಗುತ್ತಿದೆ. ಬಳಿಕ ಸುಗ್ರೀವಾಜ್ಞೆ ಹೊರಡಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತನ್ನ ವ್ಯಾಪ್ತಿಯಲ್ಲಿರುವ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಕೆ ಹಾಗೂ ರಾಜ್ಯ ಚುನಾವಣಾ ಆಯೋಗದ ನೇತೃತ್ವದಲ್ಲಿ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸುವ ಮಹತ್ವದ ನಿರ್ಣಯವನ್ನು ಸೆ. 4ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿತ್ತು.

ADVERTISEMENT

ಸರ್ಕಾರದ ಸಮರ್ಥನೆಗಳೇನು?:

ಮತಪತ್ರದ ಗೌಪ್ಯತೆಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೂಲ ಆಧಾರವಾಗಿದ್ದು, ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಪಾವಿತ್ರ್ಯವನ್ನು ಕಾಪಾಡುವ ಮೂಲಕ ಮತದಾರರನ್ನು ಬಲವಂತ, ಬೆದರಿಕೆ ಮತ್ತು ಅನುಚಿತ ಪ್ರಭಾವದಿಂದ ರಕ್ಷಿಸುತ್ತದೆ ಎಂದು ಹಲವು ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಕುಲದೀಪ್‌ ನಾಯರ್‌ ವಿರುದ್ಧದ ಕೇಂದ್ರ ಸರ್ಕಾರ (2006) ಪ್ರಕರಣದಲ್ಲಿ ‘ಮತದಾರರ ಸ್ವಾಯತ್ತತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬಾಹ್ಯ ಒತ್ತಡಗಳನ್ನು ತಡೆಯಲು ಸಾರ್ವತ್ರಿಕ ಚುನಾವಣೆಗಳಿಗೆ ರಹಸ್ಯ ಮತದಾನ ಅತ್ಯಗತ್ಯವಾಗಿದೆ’ ಎಂದೂ ಸ್ಪಷ್ಟಪಡಿಸಿದೆ. ಆ ಮೂಲಕ, ಮುಕ್ತ ಚುನಾವಣೆಗಳ ಸಾಂವಿಧಾನಿಕ ಆದೇಶವನ್ನು ಎತ್ತಿ ಹಿಡಿದಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ವಿಶ್ವಾಸದ ಮಹತ್ವವನ್ನು ಸುಪ್ರೀಂ ಕೋರ್ಟ್‌ ಒತ್ತಿ ಹೇಳಿದ್ದು, ಮತಪತ್ರದ ಗೌಪ್ಯತೆ ಕಾಪಾಡುವಾಗ ಪಾರದರ್ಶಕತೆ ಹೆಚ್ಚಿಸಲು ಇವಿಎಂಗಳಲ್ಲಿ ದಾಖಲಾಗುವ ಮತಗಳ ಪರಿಶೀಲನೆಗೆ ವೆರಿಫೈಯಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್ ) ಪರಿಚಯಿಸಿತ್ತು. ಅಲ್ಲದೆ, ಇವಿಎಂ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳನ್ನು ಪರಿಹರಿಸಲು ನಿರಂತರ ಸುಧಾರಣೆಗಳ ಅಗತ್ಯವನ್ನೂ ಎತ್ತಿ ತೋರಿಸಿದೆ. ಆದರೆ, ಇವಿಎಂಗಳಲ್ಲಿನ ದೌರ್ಬಲ್ಯಗಳು ಮತ್ತು ಮತದಾರರ ಪಟ್ಟಿಗಳಲ್ಲಿನ ವ್ಯತ್ಯಾಸಗಳ ಮೂಲಕ ಚುನಾವಣಾ ಕುತಂತ್ರಗಳ ಸಾಧ್ಯತೆಯ ಕುರಿತು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿರುವುದರಿಂದ, ಸಾರ್ವಜನಿಕ ನಂಬಿಕೆಯನ್ನು ಮರು ಸ್ಥಾಪಿಸಲು ಸದೃಢವಾದ ರಹಸ್ಯ ಮತಪತ್ರ ವ್ಯವಸ್ಥೆಗೆ ಮರಳುವ ಅಗತ್ಯ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಸಮರ್ಥನೆ ನೀಡಿದೆ.

ಈ ಕಳವಳಗಳ ಕಾರಣಕ್ಕೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಗದ ಮತಪತ್ರ ವ್ಯವಸ್ಥೆಗೆ ಮರಳಲು ನಿರ್ಧರಿಸಲಾಗಿದೆ.  ಕಾಗದ ಮತಪತ್ರಗಳು ಅಥವಾ ಇತರ ಗೌಪ್ಯ ಕಾರ್ಯವಿಧಾನಗಳ ಬಳಕೆಯ ಮೂಲಕ ರಹಸ್ಯ ಮತದಾನ ವ್ಯವಸ್ಥೆಯು, ಮತದಾರರು ಪ್ರತೀಕಾರದ ಭಯ ಇಲ್ಲದೆ ತಮ್ಮ ಮತ ಚಲಾಯಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ ಎಂದೂ ವಿವರಿಸಿದೆ.

ತಿದ್ದುಪಡಿ ಮಸೂದೆಗಳು ಯಾವುವು?

  • ಗ್ರೇಟರ್‌ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ)

  • ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ)

  • ಕರ್ನಾಟಕ ನಗರ ಪಾಲಿಕೆಗಳು (ಎರಡನೇ ತಿದ್ದುಪಡಿ)

  • ಕರ್ನಾಟಕ ಪುರಸಭೆಗಳು (ತಿದ್ದುಪಡಿ)

‘ವಿಧಾನ ಮಂಡಲಕ್ಕೆ ಅಧಿಕಾರವಿದೆ’

‘ಸ್ಥಳೀಯ ಪ್ರಾಧಿಕಾರಗಳಿಗೆ ಮುಕ್ತ, ನ್ಯಾಯಯುತ ಮತ್ತು ಪಾರದರ್ಶಕ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು, ಕಾಗದ ಮತಪತ್ರಗಳನ್ನು ಬಳಸಿಕೊಂಡು ರಹಸ್ಯ ಮತದಾನ ವ್ಯವಸ್ಥೆ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ಮಾಡಬೇಕಿದೆ. ಆ ಮೂಲಕ, ರಾಜ್ಯ ಚುನಾವಣಾ ಆಯೋಗವು ಮತದಾರರ ಗೌಪ್ಯತೆ ಮತ್ತು ಚುನಾವಣಾ ಸಮಗ್ರತೆಯೊಂದಿಗೆ ಚುನಾವಣೆಗಳನ್ನು ನಡೆಸಲು ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ. ಮಸೂದೆ ರೂಪಿಸಲು ರಾಜ್ಯ ವಿಧಾನ ಮಂಡಲಕ್ಕೆ ಅಧಿಕಾರವಿದೆ. ಮಸೂದೆಯಲ್ಲಿರುವ ಉಪಬಂಧಗಳು ಕೇಂದ್ರದ ಜಾರಿಯಲ್ಲಿರುವ ಯಾವುದೇ ಕಾಯ್ದೆಯ ಉಪಬಂಧಗಳಿಗೆ ವ್ಯತಿರಿಕ್ತ ಆಗುವುದಿಲ್ಲ. ಹೀಗಾಗಿ, ಮಸೂದೆಗಳನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಾಯ್ದಿರಿಸುವ ಅಗತ್ಯವೂ ಇಲ್ಲ’ ಎಂದು ಕಾನೂನು ಮತ್ತು ಸಂಸದೀಯ ಇಲಾಖೆ ಪ್ರತಿಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.