ಬೆಂಗಳೂರು: ‘ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, 17 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿರುವ ರೈತರ ಬದುಕಿಗೆ ಕಾಯಕಲ್ಪ ನೀಡಲು ನಿರ್ಧರಿಸಿದ್ದೇನೆ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.
ಬಮೂಲ್ ಕಚೇರಿಯಲ್ಲಿ ಶನಿವಾರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನನ್ನ ಸ್ಪರ್ಧೆಯನ್ನು ಡಿ.ಕೆ. ಸಹೋದರರು ಹಾಗೂ ದೇವೇಗೌಡರ ಕುಟುಂಬದ ನಡುವಣ ಹೋರಾಟ ಎಂಬ ಚರ್ಚೆ ನಡೆಯುತ್ತಿದೆ. ಕ್ಷೀರ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶವಾದರೆ ರೈತರಿಗೆ ಅನ್ಯಾಯವಾಗುತ್ತದೆ. ಯಾರು ಏನೇ ಚರ್ಚೆ ಮಾಡಲಿ, ರಾಜಕೀಯ ಹೊರಗಿಟ್ಟು ಹಾಲು ಉತ್ಪಾದನೆ– ಬಳಕೆಯಲ್ಲಿ ಗಣನೀಯ ಬದಲಾವಣೆ ತರುವತ್ತ ಚಿತ್ತ ಹರಿಸುತ್ತೇನೆ’ ಎಂದರು.
‘ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಂಬ ಬಣಗಳಿಲ್ಲ. ನಮ್ಮದು ಕಾಂಗ್ರೆಸ್ ಬಣ ಅಷ್ಟೆ. ಕೆಎಂಎಫ್ ಅಧ್ಯಕ್ಷ ಸ್ಥಾನದ ವಿಚಾರ ಚರ್ಚೆಯಾಗಿಲ್ಲ. ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಕನಕಪುರ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೇನೆ’ ಎಂದು ಹೇಳಿದರು.
ಉತ್ತರಹಳ್ಳಿ ಕಬಳಿಕೆಯ ಚರ್ಚೆಗೂ ಸಿದ್ಧ
‘ಬಿಡದಿ ಉಪನಗರ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಸೇರಿದಂತೆ ಬಿಜೆಪಿಯ ಹಲವರು ಭೂಕಬಳಿಕೆ ಆರೋಪ ಮಾಡಿದ್ದಾರೆ. ಎಲ್ಲಾ ಮಾಹಿತಿಯನ್ನು ಪಡೆದ ನಂತರ ಈ ಕುರಿತು ಚರ್ಚೆಗೆ ಬರಲಿ. ಅವರ ಬಳಿ ಮಾಹಿತಿ ಇಲ್ಲದಿದ್ದರೆ ನಾನೇ ನೀಡುತ್ತೇನೆ. ಹಾಗೆಯೇ ಉತ್ತರಹಳ್ಳಿ ಕಬಳಿಕೆ ಕುರಿತೂ ಚರ್ಚೆ ನಡೆಸಬಹುದು’ ಎಂದರು.
‘ಕಾಂಗ್ರೆಸ್ ನೇತೃತ್ವದ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ನಡೆಸಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವಧಿಯ ಕಾರ್ಯವನ್ನು ಮುಂದುವರಿಸಲಾಗಿದೆ. ಉಪನಗರಗಳು ರಚನೆ ಕುರಿತು ಅವರದೇ ಸರ್ಕಾರದ ಅವಧಿಯಲ್ಲಿ ನಿರ್ಧಾರವಾಗಿತ್ತು. ರೈತರಿಗೆ ತೊಂದರೆಯಾಗದಂತೆ ನ್ಯಾಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.