ADVERTISEMENT

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿಷೇಧಿಸಿ: ಪ್ರಮೋದ್‌ ಮುತಾಲಿಕ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 10:03 IST
Last Updated 8 ಆಗಸ್ಟ್ 2020, 10:03 IST
ಪ್ರಮೋದ್ ಮುತಾಲಿಕ್‌
ಪ್ರಮೋದ್ ಮುತಾಲಿಕ್‌   

ವಿಜಯಪುರ: ‘ರಾಮಮಂದಿರ ಕೆಡವಿ ಮತ್ತೆ ಅದೇ ಜಾಗದಲ್ಲಿ ಬಾಬರಿ ಮಸೀದಿ ನಿರ್ಮಿಸುತ್ತೇವೆ’ ಎಂಬ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಮುಸ್ಲಿಂ‍ಪರ್ಸನಲ್‌ ಲಾ ಬೋರ್ಡ್)‌ಯನ್ನು ನಿಷೇಧಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ‌ ಹೇಳಿಕೆಯು ಸಮಾಜದ್ರೋಹ, ದೇಶದ್ರೋಹ ಮತ್ತು ಸಂವಿಧಾನ ವಿರೋಧಿಯಾಗಿದ್ದು, ಇದರ ವಿರುದ್ಧ ಕೇಂದ್ರ ಸರ್ಕಾರ ತಕ್ಷಣ ಕ್ರಮಕೈಗೊಳ್ಳುವುದನ್ನು ಬಿಟ್ಟು ಮೃದುಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದರು.

ಸುಪ್ರೀಂಕೋರ್ಟ್‌ ಆದೇಶ ಪಾಲಿಸಲು ಆಗದವರು ದೇಶದಲ್ಲಿ ಇರಲು ನಾಲಾಯಕ್‌. ಅಂಥವರು ಪಾಕಿಸ್ತಾನಕ್ಕೆ ಹೋಗಲಿ,ಇಲ್ಲವೇ ಸರ್ಕಾರವೇ ಅವರನ್ನು ಪಾಕಿಸ್ತಾನಕ್ಕೆ ಅಟ್ಟಲಿ ಎಂದು ಒತ್ತಾಯಿಸಿದರು.

ADVERTISEMENT

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಇಕ್ಬಾಲ್‌ ಅನ್ಸಾರಿ ಅವರಂತಹ ರಾಮಮಂದಿರ ನಿರ್ಮಾಣ ವಿರೋಧಿಗಳನ್ನು ಆಹ್ವಾನಿಸಿತ್ತು. ಆದರೆ, ಜೀವನ ಪೂರ್ತಿ ಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ ಪ್ರವೀಣ್‌ಭಾಯಿ ತೊಗಾಡಿಯಾ ಅವರನ್ನು ಸೌಜನ್ಯಕ್ಕೂ ಆಹ್ವಾನಿಸದೇ ಇರುವುದು ಖಂಡನೀಯ ಎಂದರು.

ಆಲೋಪಥಿ ಲಾಬಿಗೆ ಮಣಿದ ಸರ್ಕಾರ:ಡಾ.ಗಿರಿಧರ ಕಜೆ ಅವರು ಕೊರೊನಾ ವಾಸಿ ಮಾಡಬಲ್ಲಂತ 70 ಲಕ್ಷ ಆಯುರ್ವೇದಿಕ್‌ಗುಳಿಗೆಯನ್ನು ಜನರಿಗೆ ಉಚಿತವಾಗಿ ವಿತರಿಸಿಲು ನೀಡಿದ್ದರೂ ಸಹ ಅದನ್ನು ರಾಜ್ಯ ಸರ್ಕಾರ ಇದುವರೆಗೂ ವಿತರಣೆ ಮಾಡದೇ ಆಲೋಪಥಿ ಲಾಬಿಗೆ ಮಣಿದಿದೆ. ಆದಷ್ಟು ಬೇಗ ಆಯುರ್ವೇದಿಕ್‌ ಗುಳಿಗೆಗಳನ್ನು ಜನರಿಗೆ ವಿತರಿಸಬೇಕು ಎಂದು ಮುತಾಲಿಕ್‌ ಆರೋಪಿಸಿದರು.

‘ಕೋವಿಡ್‌ ನಿರ್ವಹಣೆಯಲ್ಲಿ ಭ್ರಷ್ಟಾಚಾರದ ವಾಸನೆ ಹರಡಿದೆ. ರಾಜ್ಯ ಸರ್ಕಾರ ನೂರಕ್ಕೆ ನೂರರಷ್ಟು ಭ್ರಷ್ಟಾಚಾರ ನಡೆಸಿದೆ. ಆದರೆ, ವಿರೋಧ ಪಕ್ಷ ಸರಿಯಾದ ಸಾಕ್ಷಿಗಳನ್ನು ನೀಡುವಲ್ಲಿ ಎಡವಿದೆ. ಕೋವಿಡ್‌ ಸಾವು, ನೋವಿನಲ್ಲಿ ಸಚಿವರು ಭ್ರಷ್ಟಾಚಾರ ಮಾಡುವ ಮೂಲಕ ಪಾಪದ ಕೆಲಸ ಮಾಡುತ್ತಿದ್ದಾರೆ. ಜಗತ್ತಿನಲ್ಲಿ ನಿಮ್ಮಷ್ಟು ಪಾಪಿಗಳು ಮತ್ತ್ಯಾರು ಇಲ್ಲ’ ಎಂದು ಹರಿಹಾಯ್ದರು.

ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿ:‘ಆಗಸ್ಟ್‌ 22ರಿಂದ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡದಿದ್ದರೂ ಆಚರಿಸುವುದು ನಿಶ್ಚಿತ. ಸರ್ಕಾರ ಬೇಕಾದರೆ ನಮ್ಮನ್ನು ಬಂಧಿಸಲಿ, ಗಣೇಶನ ಮೂರ್ತಿಗಳನ್ನು ಬೇಕಾದರೆ ಸೀಜ್‌ ಮಾಡಲಿ ನೋಡಿಕೊಳ್ಳುತ್ತೇವೆ’ ಎಂದು ಮುತಾಲಿಕ್‌ ಸವಾಲು ಹಾಕಿದರು.

ಮಹಾರಾಷ್ಟ್ರ ಸರ್ಕಾರ ಈಗಾಗಲೇ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದೆ. ರಾಜ್ಯದಲ್ಲೂ ಅವಕಾಶ ನೀಡಬೇಕು. ಕೋವಿಡ್‌ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸುತ್ತೇವೆ ಎಂದರು.

ಶ್ರೀರಾಮ ಸೇನೆಯ ಮುಖಂಡರಾದ ನೀಲಕಂಠ ಕಂದಗಲ್‌, ಗಂಗಾಧರ ಕುಲಕರ್ಣಿ, ರಾಕೇಶ್‌ಮಠ, ಬಸವರಾಜ ಕಲ್ಯಾಣಪ್ಪಗೋಳ, ಆನಂದ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.