ಮೈಸೂರು/ಹಾಸನ: ‘ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ವಿಷಯಕ್ಕೆ ಸಂಬಂಧಿಸಿ ತಮಿಳುನಾಡಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತ ವರದಿ ಆಧರಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಪ್ರಿಯಾಂಕ್ ಖರ್ಗೆ ಕೋರಿರುವುದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದರು.
‘ಪ್ರಿಯಾಂಕ್ ಅವರಿಗೆ ಬೆದರಿಕೆ ಹಾಕುತ್ತಿರುವ ದುಷ್ಟ ಶಕ್ತಿಗಳು ಯಾವಾಗಲೂ ಇಂತಹದ್ದೇ ಕೆಲಸ ಮಾಡುತ್ತ ಬಂದಿವೆ. ಬೆದರಿಕೆಗಳಿಗೆ ಹೆದರುವುದಿಲ್ಲ. ಅವರಿಗೆ ಅಗತ್ಯ ಭದ್ರತೆ ಒದಗಿಸಲಾಗುವುದು’ ಎಂದರು.
‘ತಾಕತ್ತಿದ್ದರೆ ಆರ್‌ಎಸ್‌ಎಸ್ ನಿಷೇಧಿಸಿ’ ಎಂಬ ಬಿಜೆಪಿ ನಾಯಕರ ಸವಾಲಿಗೆ ಪ್ರತಿಕ್ರಿಯಿಸಿ, ‘ಬಿಜೆಪಿಯವರು ಚುನಾವಣೆ ವೇಳೆ, ತಾಕತ್ತಿದ್ದರೆ ಬನ್ನಿ ಎಂದು ಸವಾಲು ಹಾಕಿದ್ದರು. ನಂತರ ಸೋಲಲಿಲ್ಲವೇ?’ ಎಂದರು.
ಚುನಾವಣೆ ನಡೆಸಲು ಸಿದ್ಧ: ‘ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ಸಿದ್ಧವಾಗಿದೆ. ಕೋರ್ಟ್ ಹೇಳಿದ ತಕ್ಷಣ ಚುನಾವಣೆ ನಡೆಸುತ್ತೇವೆ’ ಎಂದು ಹಾಸನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಹೇಳಿದರು.
‘ಎಲ್ಲ ಚುನಾವಣೆಗಳನ್ನು ಹಂತಹಂತವಾಗಿ ಮಾಡಲಾಗುವುದು. ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪರವಾಗಿದೆ. ಪ್ರಜಾಪ್ರಭುತ್ವವು ಗಟ್ಟಿಯಾಗುವುದೇ ಚುನಾವಣೆಗಳಿಂದ’ ಎಂದರು.
ಸಮೀಕ್ಷೆ: ಶೇ 90 ಗುರಿ ಸಾಧನೆ: ‘ಜಾತಿವಾರು ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಸಮೀಕ್ಷೆಯು ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲೂ ವೇಗವಾಗಿ ನಡೆದಿದ್ದು, ಶೇ 90ಕ್ಕಿಂತ ಹೆಚ್ಚು ಗುರಿ ಸಾಧನೆಯಾಗಿದೆ’ ಎಂದರು.
ಜೆಡಿಎಸ್ ಅಧಿಕಾರದಲ್ಲಿದ್ದಾಗ ನಮ್ಮ ಶಾಸಕರಿಗೆ ಅನುದಾನ ಕೊಟ್ಟಿದ್ದರಾ? ನಾವು ತಾರತಮ್ಯ ಮಾಡುವುದಿಲ್ಲ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರಿಗೂ ಅನುದಾನ ಒದಗಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
‘ಔತಣಕೂಟದಲ್ಲಿ ಸರ್ಕಾರ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಬಿಹಾರ ಚುನಾವಣೆಯಲ್ಲಿ ಹೈಕಮಾಂಡ್ ಬ್ಯುಸಿ ಆಗಿದ್ದು ನವೆಂಬರ್ ನಂತರ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲಾಗುವುದುಸಿದ್ದರಾಮಯ್ಯ, ಮುಖ್ಯಮಂತ್ರಿ
ವೇತನ ಬಂದಿಲ್ಲ ಎಂದು ಕಲಬುರಗಿಯಲ್ಲಿ ಗ್ರಂಥಪಾಲಕಿ ಆತ್ಮಹತ್ಯೆಗೆ ಪ್ರಿಯಾಂಕ್ ಅವರೇ ಹೊಣೆ. ಅವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡದೇ ಕ್ಷೇತ್ರ ಇಲಾಖೆ ಜಿಲ್ಲೆಯತ್ತ ಗಮನ ಹರಿಸಲಿಎನ್.ರವಿಕುಮಾರ್, ಮೇಲ್ಮನೆ ಸದಸ್ಯ
‘ಆರ್‌ಎಸ್‌ಎಸ್ ರಾಜಕೀಯ ಮೀರಿದ ಸಂಘಟನೆ’
ಹುಬ್ಬಳ್ಳಿ: ‘ಆರ್‌ಎಸ್‌ಎಸ್ ರಾಜಕೀಯ ಮೀರಿದ ಸಂಘಟನೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಚಟುವಟಿಕೆಗೆ ಜಾಗ ನೀಡದಂತೆ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಬಿಜೆಪಿ ಖಂಡಿಸುತ್ತದೆ’ ಎಂದು ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು. ‘ಸಮಾಜದಲ್ಲಿ ದೇಶಭಕ್ತಿ ಭಾವನೆ ಮೂಡಿಸಲು ಶ್ರಮಿಸುತ್ತಿರುವ ಆರ್‌ಎಸ್‌ಎಸ್ ಬಗ್ಗೆ ಜವಾಹರಲಾಲ್ ನೆಹರೂ ಇಂದಿರಾ ಗಾಂಧಿ ಸಕಾರಾತ್ಮಕವಾಗಿ ಮಾತನಾಡಿದ್ದರು. ಬಿಜೆಪಿ ಕಾಂಗ್ರೆಸ್ ಸೇರಿ ವಿವಿಧ ಪಕ್ಷಗಳಲ್ಲಿ ಇರುವವರೂ ಸಂಘದ ಸ್ವಯಂಸೇವಕರಾಗಿದ್ದಾರೆ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು ‘ಆರ್‌ಎಸ್‌ಎಸ್ ಬೆದರಿಕೆ ಒಡ್ಡುವ ಉಗ್ರವಾದಿ ಚಟುವಟಿಕೆ ಮಾಡುವ ಸಂಘಟನೆಯಲ್ಲ. ಬೆದರಿಕೆ ಒಡ್ಡುವಂತಹ ಸಂಘಟನೆಗಳ ಮೇಲಿನ ಪ್ರಕರಣಗಳನ್ನು ರಾಜ್ಯ ಸರ್ಕಾರವೇ ಹಿಂಪಡೆದಿದೆ’ ಎಂದರು. ‘ರಾಜ್ಯದಲ್ಲಿ ನಿರಂತರ ಮಳೆಯಿಂದಾದ ಬೆಳೆ ಹಾನಿಗೆ ಸರ್ಕಾರ ಈವರೆಗೆ ಪರಿಹಾರ ನೀಡಿಲ್ಲ. ಕೂಡಲೇ ರೈತ ಮುಖಂಡರು ಸರ್ವಪಕ್ಷಗಳ ಸಭೆ ಕರೆಯಬೇಕು. ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.