ADVERTISEMENT

ಬಂಡೀಪುರ: 10 ಸಾವಿರ ಎಕರೆಗೂ‌ ಹೆಚ್ಚು ಅರಣ್ಯವನ್ನು ಸುಟ್ಟು ಕಾಳ್ಗಿಚ್ಚು ತಹಬದಿಗೆ

ಎರಡನೇ ದಿನವೂ ಸೇನಾ ಹೆಲಿಕಾಪ್ಟರ್‌ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2019, 4:21 IST
Last Updated 27 ಫೆಬ್ರುವರಿ 2019, 4:21 IST
ಸೇನಾ ಹೆಲಿಕಾಪ್ಟರ್‌ನಿಂದ ಕಾಳ್ಗಿಚ್ಚಿನ ಮೇಲೆ ಮಂಗಳವಾರ ನೀರು ಸುರಿಯುತ್ತಿರುವ ದೃಶ್ಯ 
ಸೇನಾ ಹೆಲಿಕಾಪ್ಟರ್‌ನಿಂದ ಕಾಳ್ಗಿಚ್ಚಿನ ಮೇಲೆ ಮಂಗಳವಾರ ನೀರು ಸುರಿಯುತ್ತಿರುವ ದೃಶ್ಯ    

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ 10 ಸಾವಿರ ಎಕರೆಗೂ‌ ಹೆಚ್ಚು ಅರಣ್ಯವನ್ನು ಸುಟ್ಟು ಕರಕಲಾಗಿಸಿದ ಕಾಳ್ಗಿಚ್ಚು ಮಂಗಳವಾರ ಬಹುತೇಕ ನಿಯಂತ್ರಣಕ್ಕೆ ಬಂದಿದೆ.

ಸೇನಾ ಹೆಲಿಕಾಪ್ಟರ್‌ಗಳು ಮಂಗಳವಾರವೂ ಏಳು ಸುತ್ತು ಕಾರ್ಯಾಚರಣೆ ನಡೆಸಿದವು. ಬೆಂಕಿ ಕಂಡು ಬಂದ ಕೇರಳ ಹಾಗೂ ತಮಿಳುನಾಡು ಗಡಿ ಭಾಗಗಳಲ್ಲಿ ನೀರು ಸುರಿದು, ಬೆಂಕಿ ಆರಿಸಿವೆ.

‘ಹೆಲಿಕಾಪ್ಟರ್‌ಗಳನ್ನು ಮೈಸೂರಿನಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ರಾಜ್ಯ ಸರ್ಕಾರದಿಂದ ಮತ್ತೆ ಯಾವ ಸೂಚನೆಯೂ ಬಂದಿಲ್ಲ’ ಎಂದು ರಕ್ಷಣಾ ಇಲಾಖೆ ಸಾರ್ವಜನಿಕ ಸಂಪರ್ಕ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ.

ADVERTISEMENT

ಹಾನಿ–ಗೊಂದಲ: ಬಂಡೀಪುರದಲ್ಲಿ ಹಿಂದೆಂದೂ ಕಂಡರಿಯದ ಕಾಳ್ಗಿಚ್ಚಿನಲ್ಲಿ ಎಷ್ಟು ಎಕರೆ ಕಾಡು ನಾಶವಾಗಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ದೊಡ್ಡ ಸಂಖ್ಯೆಯನ್ನು ಹೇಳುತ್ತಿಲ್ಲ. 10 ಸಾವಿರ ಎಕರೆಗಿಂತ ಹೆಚ್ಚಿನ ಕಾಡು ನಾಶವಾಗಿಲ್ಲ ಎಂದು ಹೇಳುತ್ತಿದ್ದಾರೆ. ಪರಿಸರ ತಜ್ಞರು 15 ಸಾವಿರ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೂದಿಯಾಗಿದೆ ಎನ್ನುತ್ತಿದ್ದಾರೆ.

ಯಶಸ್ವಿ: ಸೇನಾ ಹೆಲಿಕಾಪ್ಟರ್ ಮೂಲಕ ನಡೆಸಿದ‌ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ) ಪುನಟಿ ಶ್ರೀಧರ್ ತಿಳಿಸಿದರು.

‘ಭಾರತೀಯ ವಾಯುಸೇನೆಯ ಎರಡು ಸೇನಾ ಹೆಲಿಕಾಪ್ಟರ್ ಮಂಗಳವಾರ ಬೆಳಿಗ್ಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಕೇರಳ ಗಡಿ ಭಾಗ ಮೂಲೆಹೊಳೆ, ತಮಿಳುನಾಡು ಮುದುಮಲೆ ಅರಣ್ಯ ಭಾಗದಲ್ಲಿ ಕಂಡು ಬಂದಬೆಂಕಿಯನ್ನು ಆರಿಸಿದವು’ ಎಂದು ಮಾಹಿತಿ ನೀಡಿದರು.

ನಮ್ಮ ನಿರ್ಧಾರ ಅಲ್ಲ: ‘ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಮಾಡುವ ಬಗ್ಗೆ‌ ನಾವು ಯೋಚಿಸಿಯೇ ಇರಲಿಲ್ಲ. ಅಷ್ಟು ದುಡ್ಡು ನಮ್ಮಲ್ಲಿ ಇಲ್ಲ. ಇದು ಸಚಿವರು ಮತ್ತು ಮುಖ್ಯಮಂತ್ರಿ ನಿರ್ಧಾರ’ ಎಂದರು.

8,000 ಎಕರೆ ಅರಣ್ಯ ಪ್ರದೇಶ ಸುಟ್ಟಿರಬಹುದು. ಈ ಪ್ರದೇಶಗಳಲ್ಲಿ ಹುಲ್ಲು, ಸಣ್ಣ ಗಿಡ, ಮರಗಳು, ಲಂಟಾನ ಹೆಚ್ಚಿನ ಪ್ರಮಾಣದಲ್ಲಿ ಇದ್ದವು. ಹಸಿರು ಮರಗಳಿಗೆ ಏನೂ ಆಗಿಲ್ಲ. ಒಮ್ಮೆ ಮಳೆ ಬಿದ್ದರೆ ಎಲ್ಲವೂ ಸರಿಯಾಗುತ್ತದೆ' ಎಂದು ಹೇಳಿದರು.

10 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹೆಚ್ಚು ಹಾನಿಯಾಗಿದೆ. ಉಳಿದ ಕಡೆಗಳಲ್ಲಿ ದೊಡ್ಡ ಮಟ್ಟದ ಹಾನಿಯಾಗಿಲ್ಲ. ನಾಸಾ ನೀಡುವ ದತ್ತಾಂಶವನ್ನು ಪರಿಶೀಲಿಸಿದ ನಂತರವಷ್ಟೇ ಸ್ಪಷ್ಟಮಾಹಿತಿ ಸಿಗಲಿದೆ ಎಂದುವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜಯರಾಂ ತಿಳಿಸಿದರು.

ಗಿಣಿವಜ್ರ ಅರಣ್ಯಕ್ಕೆ ಬೆಂಕಿ

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ತೀರ್ಥಪುರ ಕುರುಚಲು ಕಾಡಿನ ಜಾಣೆಹಾರ್ ಹಾಗೂ ಗಿಣಿವಜ್ರ ಪ್ರದೇಶದ ನೂರಾರು ಎಕರೆ ಕಾಡು ಬೆಂಕಿಗೆ ಆಹುತಿ ಆಗಿದೆ. ಸೋಮವಾರ ಮತ್ತು ಮಂಗಳವಾರ ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ತೀರ್ಥಪುರ ಕುರುಚಲು ಕಾಡು ನಾಲ್ಕು ಸಾವಿರ ಹೆಕ್ಟೇರ್ ಇದೆ. ಇದಕ್ಕೆ ಹೊಂದಿಕೊಂಡೇ ಬುಕ್ಕಾಪಟ್ಟಣ, ಮುತ್ತುಗದಹಳ್ಳಿ ಅರಣ್ಯ ಇದೆ. ಇದನ್ನು ‘ಚಿಂಕಾರ’ ವನ್ಯಜೀವಿ ತಾಣವಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಿಸಿದೆ. ಗುಡ್ಡದ ಸಾಲುಗಳು ಹೊಂದಿಕೊಂಡಿದ್ದು ಬೆಂಕಿ ಹರಡಿದರೆ ಹೇರಳ ಅರಣ್ಯ ಸಂಪತ್ತು ನಾಶವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.