
ಬೆಂಗಳೂರು: ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಫಾರಿಯನ್ನು ತಾಂತ್ರಿಕ ಸಮಿತಿಯ ವರದಿ ಆಧರಿಸಿ ಹಂತ ಹಂತವಾಗಿ ಪುನರಾರಂಭಿಸಲು ನಿರ್ಧರಿಸಲಾಗಿದೆ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಎರಡೂ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಧಾರಣಾ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿಗದಿಪಡಿಸಲು ರಚಿಸಲಾಗಿರುವ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಾಂತ್ರಿಕ ಸಮಿತಿ ಈ ಕುರಿತು ಪ್ರಾಥಮಿಕ ವರದಿ ನೀಡಿತ್ತು. ವರದಿಯ ಪರಾಮರ್ಶೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಖಂಡ್ರೆ ಅವರು ಈ ಮಾಹಿತಿ ನೀಡಿದರು.
ಹುಲಿ ದಾಳಿಯಿಂದ ಸರಣಿ ಸಾವು ಸಂಭವಿಸಿದ ಕಾರಣ ಕಳೆದ ನವೆಂಬರ್ 7 ರಿಂದ ಸಫಾರಿಯನ್ನು ನಿಲ್ಲಿಸಲಾಗಿತ್ತು. ಎಚ್.ಡಿ.ಕೋಟೆಯಲ್ಲಿ ಪ್ರತಿಭಟನೆ ನಡೆಸಿದ್ದ ರೈತರು ಸೇರಿ ಸಾವಿರಾರು ಸ್ಥಳೀಯರು, ರೆಸಾರ್ಟ್ ಸಿಬ್ಬಂದಿ, ಸಫಾರಿ ನಿಲ್ಲಿಸಿರುವುದರಿಂದ ಜೀವನೋಪಾಯಕ್ಕೆ ಅಡ್ಡಿಯಾಗಿದ್ದು, ಅದನ್ನು ಪುನರಾರಂಭಿಸಬೇಕು ಎಂದು ಮನವಿ ಮಾಡಿದ್ದರು. ಜೀವವೂ ಉಳಿಯಬೇಕು ಮತ್ತು ಜೀವನೋಪಾಯವೂ ನಡೆಯಬೇಕು ಎಂಬ ಕಾರಣಕ್ಕಾಗಿ ಸಫಾರಿಯನ್ನು ನಿಯಂತ್ರಿತವಾಗಿ ಪುನರಾರಂಭ ಮಾಡುವ ಕುರಿತು ಸುದೀರ್ಘ ಚರ್ಚೆ ನಡೆಯಿತು ಎಂದರು.
ಸಫಾರಿಯಿಂದ ಬರುವ ಒಟ್ಟು ಆದಾಯದ ಮೂರನೇ ಒಂದು ಭಾಗದಷ್ಟು ಹಣವನ್ನು ಅರಣ್ಯದಂಚಿನ ಗ್ರಾಮಗಳ ಸ್ಥಳೀಯ ಸಮುದಾಯದವರಿಗೆ ಕೌಶಲ ಅಭಿವೃದ್ಧಿಗಾಗಿ, ಜಾನುವಾರುಗಳಿಗೆ ಮೇವು ಬೆಳೆಸಲು ಬಳಸಲಾಗುವುದು. ಅಲ್ಲದೇ, ಪರಿಸರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಷರತ್ತಿನೊಂದಿಗೆ ಆರಂಭಿಸಲಾಗುವುದು. ವನ್ಯಜೀವಿ–ಮಾನವ ಸಂಘರ್ಷ ತಡೆಯಲು ಸೂಕ್ತ ಸಿಬ್ಬಂದಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲು ಸಮ್ಮತಿಸಲಾಗಿದೆ ಎಂದು ತಿಳಿಸಿದರು.
ಸಫಾರಿ ವಾಹನಗಳನ್ನು ಕತ್ತಲಾದ ಬಳಿಕ ಹಾಗೂ ಹೆಚ್ಚುವರಿ ಅವಧಿಗೆ ಓಡಿಸುವುದು ಸೇರಿ ಎಲ್ಲ ಬಗೆಯ ದುರ್ಬಳಕೆ ತಡೆಗಟ್ಟಲು ಎರಡು ತಿಂಗಳಲ್ಲಿ ಎಲ್ಲ ಸಫಾರಿ ವಾಹನಗಳಿಗೆ ಎಂಜಿನ್ ಸಂಪರ್ಕಿತ ಜಿಪಿಎಸ್ ಮತ್ತು ಡ್ಯಾಷ್ ಕ್ಯಾಮ್ ಅಳವಡಿಸಬೇಕು ಎಂದು ಸೂಚಿಸಲಾಗಿದೆ ಎಂದು ಖಂಡ್ರೆ ತಿಳಿಸಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು ವಿಸ್ತೀರ್ಣ 1,036 ಚದರ ಕಿ.ಮೀ ಇದೆ. ಇದರಲ್ಲಿ ಪ್ರವಾಸೋದ್ಯಮ ವಲಯ ಕ್ಷೇತ್ರ ಶೇ 8 ಎಂದರೆ ಕೇವಲ 80 ಚದರ ಕಿ.ಮೀ. ಅದೇ ರೀತಿ ನಾಗರಹೊಳೆಯ ಒಟ್ಟು ವಿಸ್ತೀರ್ಣ 844 ಚದರ ಕಿ.ಮೀ. ಪರಿಸರ ಪ್ರವಾಸೋದ್ಯಮ ವಲಯ ಕೇವಲ 63 ಚದರ ಕಿ.ಮೀ, ಅಂದರೆ ಶೇ 7.5 ಮಾತ್ರ. ಆದ್ದರಿಂದ ಹುಲಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದಕ್ಕೆ ಸಫಾರಿಯೇ ಕಾರಣ ಎಂದು ಹೇಳಲು ವೈಜ್ಞಾನಿಕ ಆಧಾರವಿಲ್ಲ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು ವಿವರಿಸಿದರು.
ಬಂಡೀಪುರ, ಬಿಆರ್‌ಟಿ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ಮುಂಚೂಣಿ ಸಿಬ್ಬಂದಿ ಕೊರತೆ ಮತ್ತು ವಾಹನದ ಅಗತ್ಯದ ಬಗ್ಗೆ ಚರ್ಚಿಸಲಾಗಿದೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ನವೆಂಬರ್ 7 ಕ್ಕೆ ಮುನ್ನ ಸಫಾರಿಯಲ್ಲಿ ಬಳಕೆ ಆಗುತ್ತಿದ್ದ ವಾಹನಗಳ ಪೈಕಿ ಪ್ರಥಮ ಹಂತದಲ್ಲಿ ಶೇ 50 ರಷ್ಟು ವಾಹನಗಳನ್ನು ಮಾತ್ರ ಬಳಕೆ ಮಾಡಲು ನಿರ್ಧರಿಸಲಾಗಿದೆ. ಉಳಿದ ಶೇ 50 ರಷ್ಟು ವಾಹನ ಮತ್ತು ಸಿಬ್ಬಂದಿಯನ್ನು ಅರಣ್ಯದಂಚಿನ ಗ್ರಾಮಗಳ ಬಳಿ ಗಸ್ತು ಹೆಚ್ಚಿಸಲು ಬಳಸುವ ಮೂಲಕ ವನ್ಯಜೀವಿಗಳು ನಾಡಿಗೆ ಬಾರದಂತೆ ತಡೆಯಲು ಬಳಸಲಾಗುವುದು ಎಂದರು.
Highlights - ಹಂತ ಹಂತವಾಗಿ ಪುನರಾರಂಭಕ್ಕೆ ನಿರ್ಧಾರ ವಾಹನ ನಿಗಾ: ಜಿಪಿಎಸ್–ಡ್ಯಾಷ್ ಕ್ಯಾಮ್ ಬಳಕೆ ಶೇ 50 ರಷ್ಟು ಸಫಾರಿ ವಾಹನ ಬಳಕೆ:
ಎನ್‌ಟಿಸಿಎಗೆ ತಿಳಿಸಿಯೇ ಹುಲಿ ಸೆರೆ
‘ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ರಾಜ್ಯದಲ್ಲಿ ಹುಲಿಗಳನ್ನು ಸೆರೆ ಹಿಡಿಯುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ನಮ್ಮ ಇಲಾಖೆ ಪ್ರತಿಯೊಂದು ಹುಲಿಯನ್ನು ಹಿಡಿಯುವಾಗಲೂ ಎನ್‌ಟಿಸಿಎ ಪ್ರಮಾಣಿತ ಮಾನದಂಡ ಅನುಸರಿಸಲಾಗಿದೆ. ಈ ಉದ್ದೇಶಕ್ಕೆ ಸಮಿತಿ ರಚಿಸಿ ಸಮಿತಿಯ ಶಿಫಾರಸಿನಂತೆ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಸಫಾರಿ ಅವಧಿ ಇಳಿಕೆ
‘ಬಂಡೀಪುರದಲ್ಲಿ ನವೆಂಬರ್‌ವರೆಗೆ ನಡೆಯುತ್ತಿದ್ದ ಟ್ರಿಪ್ ಸಮಯ ಮತ್ತು ವಾಹನ ಸಂಖ್ಯೆಯಲ್ಲಿ ಕಡಿತ ಮಾಡಿ ಪುನರಾರಂಭಕ್ಕೆ ಸಮ್ಮತಿಸಲಾಗಿದೆ. ಈ ಹಿಂದೆ ಬಂಡೀಪುರದಲ್ಲಿ 8 ಗಂಟೆಗಳ ಕಾಲ ಸಫಾರಿ ನಡೆಯುತ್ತಿತ್ತು. ಈಗ ಅದನ್ನು 5 ಗಂಟೆಗೆ ತಗ್ಗಿಸಲಾಗಿದೆ. ಅದೇ ರೀತಿ ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಮೊದಲ ಹಂತದಲ್ಲಿ ಅನುಮತಿ ನೀಡಲಾಗಿದೆ’ ಎಂದು ಖಂಡ್ರೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.