ADVERTISEMENT

ಬಂಡೀಪುರ: ಬೇಸಿಗೆ ರಜೆಯಲ್ಲಿ ಹೆಚ್ಚಿದ ಆದಾಯ

ವನ್ಯಜೀವಿಗಳ ಕಾಣಲು ಬಂಡೀಪುರಕ್ಕೆ ಪ್ರವಾಸಿಗರ ದಂಡು

ಮಲ್ಲೇಶ ಎಂ.
Published 7 ಜೂನ್ 2019, 20:00 IST
Last Updated 7 ಜೂನ್ 2019, 20:00 IST
.
.   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದುಕೆರೆ ವಲಯದ 14 ಸಾವಿರ ಎಕರೆಗೂ ಹೆಚ್ಚು ಪ್ರದೇಶ ಫೆಬ್ರುವರಿಯಲ್ಲಿ ಬೆಂಕಿಗೆ ಆಹುತಿಯಾಗಿದ್ದರೂ, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯ ಮೇಲೆ ಅದು ಪರಿಣಾಮ ಬೀರಿಲ್ಲ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಬೇಸಿಗೆ ರಜೆಯಲ್ಲಿ (ಏಪ್ರಿಲ್‌ ಮತ್ತು ಮೇ) ಅರಣ್ಯ ಇಲಾಖೆಗೆ ಹೆಚ್ಚು ಆದಾಯವೂ ಬಂದಿದೆ.

ಈ ವರ್ಷದ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ 45,469 ಪ್ರವಾಸಿಗರು ಬಂಡೀಪುರಕ್ಕೆ ಭೇಟಿ ನೀಡಿದ್ದಾರೆ. ಏಪ್ರಿಲ್‌ನಲ್ಲಿ 19,766 ಮಂದಿ ಬಂದಿದ್ದರೆ, ಮೇನಲ್ಲಿ 25,703 ಪ್ರವಾಸಿಗರು ಭೇಟಿ ನೀಡಿದ್ದಾರೆ. ಅರಣ್ಯ ಇಲಾಖೆಗೆಎರಡು ತಿಂಗಳಲ್ಲಿ ₹ 2.18 ಕೋಟಿ ಆದಾಯ ಬಂದಿದೆ. ಕಳೆದ ವರ್ಷ ಈ ಅವಧಿಯಲ್ಲಿ ₹ 1.96 ಕೋಟಿ ಸಂಗ್ರಹವಾಗಿತ್ತು.

ADVERTISEMENT

ಮೇ ತಿಂಗಳಿನಲ್ಲೇ ಹೆಚ್ಚು: ಏಪ್ರಿಲ್‌ಗಿಂತ ಮೇ ತಿಂಗಳಲ್ಲೇ ಹೆಚ್ಚು ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ₹ 1.15 ಕೋಟಿಯಷ್ಟು ಆದಾಯ ಬಂದಿದ್ದರೆ, ಈ ವರ್ಷ ‌₹ 1.40 ಕೋಟಿ ಸಂಗ್ರಹವಾಗಿದೆ.

ಪ್ರತಿ ವರ್ಷ ಬೇಸಿಗೆ ರಜೆ‌ಯಲ್ಲಿ ಬಂಡೀಪುರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ಈ ಬಾರಿ ಕಾಳ್ಗಿಚ್ಚಿನಿಂದಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿ ಆದಾಯ ಕಡಿಮೆಯಾಗಬಹುದು ಎಂದು ಕೆಲವು ಅಧಿಕಾರಿಗಳು ಅಂದಾಜಿಸಿದ್ದರು. ಆದರೆ, ಅದು ಸುಳ್ಳಾಗಿದೆ.

2018ರಲ್ಲಿ 1.91 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದರು. ಒಟ್ಟು ₹ 8.52 ಕೋಟಿ ಆದಾಯ ಬಂದಿತ್ತು.

‘ಸಫಾರಿ, ವಸತಿಗೃಹಗಳು ಮತ್ತು ವಾಹನ ನಿಲುಗಡೆಗೆ ವಿಧಿಸುವ ಶುಲ್ಕಗಳೇ ಇಲ್ಲಿ ಆದಾಯದ ಮೂಲ. ಪ್ರತಿ ತಿಂಗಳು ಸರಾಸರಿ ₹ 50 ಲಕ್ಷ ಆದಾಯ ಇರುತ್ತದೆ. ದಸರಾ ಮತ್ತು ಬೇಸಿಗೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಆದಾಯವೂ ಹೆಚ್ಚಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬಂಡೀಪುರದಲ್ಲಿ 21 ವಸತಿಗೃಹಗಳಿವೆ ಇದೆ. ಎರಡು ಹಾಸಿಗೆಗಳಿರುವ 17 ಕೊಠಡಿ, 4 ಹಾಸಿಗೆಗಳ 1 ಕೊಠಡಿ ಮತ್ತು ಮೂರು ಡಾರ್ಮೆಟರಿಗಳಿವೆ. ಸಫಾರಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು 7 ಬಸ್ ಮತ್ತು 5 ಜಿಪ್ಸಿಗಳಿವೆ. ದಿನಂಪ್ರತಿ ಜಿಪ್ಸಿಗಳಲ್ಲಿ ಎರಡು ಟ್ರಿಪ್ ಮತ್ತು ಬಸ್ಸಿನಲ್ಲಿ ಮೂರು ಟ್ರಿಪ್ ಸಫಾರಿ ಹೋಗಲಾಗುತ್ತದೆ.

***

ಕಾಳ್ಗಿಚ್ಚಿನಿಂದ ಸಫಾರಿ ವಲಯಕ್ಕೆ ತೊಂದರೆಯಾಗಿರಲಿಲ್ಲ. ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿಲ್ಲ. ಈ ಬಾರಿ ಆದಾಯದ ಪ್ರಮಾಣ ಹೆಚ್ಚಾಗಿದೆ
– ಟಿ.ಬಾಲಚಂದ್ರ,ಬಂಡೀಪುರ ಹುಲಿ ಯೋಜನೆ ನಿರ್ದೇಶಕ

**

ಅಂಕಿ ಅಂಶ

₹ 77.37 ಲಕ್ಷ – ಏಪ್ರಿಲ್‌ನಲ್ಲಿ ಬಂದ ಆದಾಯ

₹ 1.41 ಕೋಟಿ – ಮೇ ತಿಂಗಳ ಆದಾಯ

₹ 2.18 ಕೋಟಿ – ಎರಡು ತಿಂಗಳ ಬೇಸಿಗೆ ರಜೆಯಲ್ಲಿ ಬಂದಿರುವ ಆದಾಯ

45,469 – ಎರಡು ತಿಂಗಳಲ್ಲಿ ಭೇಟಿ ನೀಡಿರುವ ಪ್ರವಾಸಿಗರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.